ನವದೆಹಲಿ:ಎಂಎಸ್ಎಂಇ ಮತ್ತು ಎಂಎಸ್ಎಂಇ ರಹಿತ ವಲಯಗಳಲ್ಲಿ ಅಲ್ಪ ವೇತನ ಮತ್ತು ಕಡಿಮೆ ಆದಾಯದಾರರ ಸುರಕ್ಷತೆಗೆ 'ಪೇಚೆಕ್ ಪ್ರೊಟೆಕ್ಷನ್ ಯೋಜನೆಯನ್ನು ಒಂದೆರಡು ದಿನದಲ್ಲಿ ಪ್ರಕಟಿಸಬೇಕೆಂದು ಕಾಂಗ್ರೆಸ್ ಕೇಂದ್ರಕ್ಕೆ ಒತ್ತಾಯಿಸಿದೆ.
ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಮೆರಿಕದಲ್ಲಿ ಜಾರಿಯಲ್ಲಿರುವ ಯೋಜನೆಯ ಮಾದರಿಯಲ್ಲೇ ಪೇಚೆಕ್ ನೌಕರರ ರಕ್ಷಣಾ ಯೋಜನೆ ಪ್ರಕಟಿಸುವಂತೆ ಸರ್ಕಾರವನ್ನು ಆಗ್ರಹಿಸುತ್ತೇವೆ. ಇದು ಶಾಸನವಲ್ಲ, ಹಣಕಾಸಿನ ನೆರವಿನ ಪ್ಯಾಕೇಜ್ ಎಂದರು.
ಏಪ್ರಿಲ್ ತಿಂಗಳ ವೇತನ ಮತ್ತು ಕೂಲಿ ಪಾವತಿಸಲು ಎಂಎಸ್ಎಂಇಗಳಿಗೆ ನೆರವಾಗಲು 1 ಲಕ್ಷ ಕೋಟಿ ರೂ. ವೇತನ ಸಂರಕ್ಷಣಾ ನೆರವು ನೀಡಬೇಕು. ಬ್ಯಾಂಕ್ಗಳಿಗೆ ತೆರಳಿ ಸಾಲ ಪಡೆಯಲು ಅನುಕೂಲ ಆಗುವಂತೆ ಎಂಎಸ್ಎಂಇ ಉದ್ಯಮಿಗಳಿಗೆ 1 ಲಕ್ಷ ಕೋಟಿ ರೂ. ಸಾಲ ಖಾತರಿ ನಿಧಿ ಅನುಷ್ಠಾನಕ್ಕೆ ತರುವಂತೆ ಕೋರಿದರು.
ಆದಾಯ ತೆರಿಗೆ ಇಲಾಖೆ ಪ್ರಕಾರ, 1 ಕೋಟಿ ಜನರ ವಾರ್ಷಿಕ 3.50 ಲಕ್ಷ ರೂ.ಗಿಂತ ಕಡಿಮೆ ಸಂಬಳದ ಆದಾಯ ಅಥವಾ ಮಾಸಿಕ 30,000 ರೂ.ಗೂ ಕಡಿಮೆ ವೇತನ ಪಡೆಯುತ್ತಿದ್ದಾರೆ. ಈ 1 ಕೋಟಿ ಜನರಿಗೆ ತಿಂಗಳಿಗೆ ಸರಾಸರಿ 15,000 ರೂ. ಸಂಬಳ ಎಂದು ಭಾವಿಸಿ ನೀಡಬೇಕು. ಏಪ್ರಿಲ್ ತಿಂಗಳಲ್ಲಿ 15,000 ಕೋಟಿ ರೂ. ತೆರಿಗೆ ರಿಟರ್ನ್ಸ್ ಸಲ್ಲಿಕೆಯಾಗಿದೆ. ಹಿಂದೆ ತೆರಿಗೆ ಪಾವತಿಸಿದ 1 ಕೋಟಿ ಜನರ ಜೀವನೋಪಾಯಕ್ಕೆ ಇದು ದೊಡ್ಡ ಮೊತ್ತವಲ್ಲ ಎಂದರು.
ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಮತ್ತು ಉದ್ಯೋಗಿಗಳ ರಾಜ್ಯ ವಿಮೆಗೆ (ಇಎಸ್ಐ) ಉದ್ಯೋಗದಾತರ ಕೊಡುಗೆಗಳನ್ನು ತಾತ್ಕಾಲಿಕ ಆಧಾರದ ಮೇಲೆ ಮುಂದಿನ 3 ತಿಂಗಳು ರದ್ದು ಮಾಡುವಂತೆ ಸೂಚಿಸಿದೆ.