ಕರ್ನಾಟಕ

karnataka

ETV Bharat / business

ಸಿಂಗ್- ರಾಜನ್​ ಕಾಲದಲ್ಲಿ ಬ್ಯಾಂಕ್​ಗಳ ನಾಶ... ನಿರ್ಮಲಾ ಹೇಳಿಕೆಗೆ ಮಾಜಿ ಪಿಎಂ ಕೆಂಡಾಮಂಡಲ - ಪಿಎಂಸಿ ಬ್ಯಾಂಕ್

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ ಉಪನ್ಯಾಸ ಕಾರ್ಯಕ್ರಮದಲ್ಲಿ ಮನಮೋಹನ್ ಸಿಂಗ್ ಮತ್ತು ರಘುರಾಮ್ ರಾಜನ್ ಅವರ ಅಧಿಕಾರದ ಅವಧಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್​ಗಳಿಗೆ ಅತ್ಯಂತ ಕೆಟ್ಟಕಾಲ ಆಗಿತ್ತು ಎಂದು ದೂರಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಡಾ.ಸಿಂಗ್​, ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಬದಲು ಕೇಂದ್ರ ಸರ್ಕಾರವು 'ತನ್ನ ವಿರೋಧಿಗಳ ಮೇಲೆ ಆರೋಪ ಹೊರಿಸಲು ಪ್ರಯತ್ನಿಸುತ್ತಿದೆ' ಎಂದು ತಿರುಗೇಟು ನೀಡಿದ್ದಾರೆ.

ಸಾಂದರ್ಭಿಕ ಚಿತ್ರ

By

Published : Oct 17, 2019, 4:36 PM IST

ಮುಂಬೈ:ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಬದಲು ಕೇಂದ್ರ ಸರ್ಕಾರವು 'ತನ್ನ ವಿರೋಧಿಗಳ ಮೇಲೆ ಆರೋಪ ಹೊರಿಸಲು ಪ್ರಯತ್ನಿಸುತ್ತಿದೆ' ಎಂದು ಮಾಜಿ ಪ್ರಧಾನಿ/ ಆರ್ಥಿಕ ತಜ್ಞ ಡಾ. ಮನಮೋಹನ್ ಸಿಂಗ್ ಅವರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದರು.

ಬುಧವಾರ ಕೊಲಂಬಿಯಾ ವಿವಿಯ ಸ್ಕೂಲ್ ಆಫ್ ಇಂಟರ್​ನ್ಯಾಷನಲ್​ ಆ್ಯಂಡ್​ ಪಬ್ಲಿಕ್​ ಅಫೇರ್ಸ್​ನಲ್ಲಿ ಉಪನ್ಯಾಸ ನೀಡಿದ್ದ ಸೀತಾರಾಮನ್ ಅವರು, ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದ ಮತ್ತು ರಘುರಾಮ್ ರಾಜನ್ ಆರ್​ಬಿಐ ಗವರ್ನರ್ ಆಗಿದ್ದ ಅವಧಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್​ಗಳಿಗೆ ಅತ್ಯಂತ ಕೆಟ್ಟಕಾಲವಾಗಿತ್ತು ಎಂದು ಟೀಕಿಸಿದ್ದರು.

ತಮ್ಮ ಆಳ್ವಿಕೆಯಲ್ಲಿನ ಬ್ಯಾಂಕಿಂಗ್ ಕ್ಷೇತ್ರವನ್ನು ನಿಭಾಯಿಸಿದ ಆರೋಪಕ್ಕೆ ಪ್ರತಿಕ್ರಿಯಿಸಿರುವ ಡಾ. ಮನಮೋಹನ್​ ಸಿಂಗ್ ಅವರು, ಎನ್​ಡಿಎ ಸರ್ಕಾರದ ನಿರಾಸಕ್ತಿ ಮತ್ತು ವಿಳಂಬ ನೀತಿಯಿಂದ ಇಂದು ದೇಶದ ಆರ್ಥಿಕ ಸ್ಥಿತಿ ತೀವ್ರವಾಗಿ ಕುಸಿದಿದೆ. ಆಟೋಮೊಬೈಲ್ ವಲಯದಲ್ಲಿನ ಉದ್ಯಮ ಪಾತಾಳಕ್ಕೆ ಕುಸಿದಿದೆ. ಮಹಾರಾಷ್ಟ್ರದಲ್ಲಿ ಹಲವು ಕೈಗಾರಿಕೆಗಳು ಬಾಗಿಲು ಮುಚ್ಚುತ್ತಿವೆ. ಆರ್ಥಿಕ ಹಿಂಜರಿತದಿಂದ ಜನತೆಯ ಮೇಲೆ ತೀವ್ರ ಹೊಡೆತ ಬಿದ್ದಿದೆ. ಆದರೆ, ಸರ್ಕಾರ ಬೇರೆಯವರು ಮೇಲೆ ಆಪಾದನೆ ಹೊರಿಸುವ ಪ್ರಯತ್ನದಲ್ಲಿ ಮುಳುಗಿದೆ ಎಂದರು.

​ನಾನು ಪ್ರಧಾನಿ ಕಚೇರಿಯಲ್ಲಿದ್ದಾಗ ಕೆಲವು ದೌರ್ಬಲ್ಯಗಳು ಇದ್ದವು. ಆದರೆ, ಯಾವಾಗಲೂ ದೋಷಗಳು ಯುಪಿಎಯಲ್ಲಿ ಇದ್ದವು ಎಂದು ನೀವು ಹೇಳುವಂತಿಲ್ಲ. ನೀವು ಐದು ವರ್ಷಗಳಿಂದ ಅದೇ ಕಚೇರಿಯಲ್ಲಿದ್ದೀರಿ. ಯುಪಿಎ ಬಗ್ಗೆ ಟೀಕೆ ಮಾಡುತ್ತಾ ಹೋಗುವುದು ಸರಿಯಲ್ಲ ಎಂದು ಮಾಜಿ ಪ್ರಧಾನಿ ತಿರುಗೇಟು ನೀಡಿದ್ದಾರೆ.

ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್​ ಲಿಮಿಟೆಡ್​ಗೆ (ಪಿಎಂಸಿ) ಏನಾಗಿದೆ ಎಂಬುದು ಗೊತ್ತಿದೆ. ಪಿಎಂಸಿ ಸಮಸ್ಯೆ ಪರಿಶೀಲಿಸುವಂತೆ ಹಣಕಾಸು ಸಚಿವರಿಗೆ, ಮಾಹಾರಾಷ್ಟ್ರ ಮುಖ್ಯಮಂತ್ರಿಗೆ ಮತ್ತು ಪ್ರಧಾನಿಗೆ ಈ ಮೂಲಕ ಮನವಿ ಮಾಡುತ್ತೇನೆ. ಜನರು ಆಘಾತದಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ತಕ್ಷಣಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ಡಾ. ಸಿಂಗ್ ಆಗ್ರಹಿಸಿದ್ದಾರೆ.

ABOUT THE AUTHOR

...view details