ನವದೆಹಲಿ:2020-21ರ ಮೂರನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ 0.4ರಷ್ಟು ಬೆಳವಣಿಗೆ ತೋರಿಸುತ್ತದೆ ಎಂದು ಅಂಕಿ - ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ತಿಳಿಸಿದೆ.
ಸತತ ಎರಡು ತ್ರೈಮಾಸಿಕಗಳ ಕುಸಿತದ ನಂತರ ಭಾರತದ ಆರ್ಥಿಕತೆಯು ಈಗ ತಾಂತ್ರಿಕ ಹಿಂಜರಿತದಿಂದ ಹೊರಬಂದಿದೆ. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ 7.5ರಷ್ಟು ಸಂಕೋಚನಕ್ಕೆ ಪ್ರತಿಯಾಗಿ ಡಿಸೆಂಬರ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ 0.4ರಷ್ಟಿದೆ.
2020-21ರ ಮೂರನೇ ತ್ರೈಮಾಸಿಕದಲ್ಲಿ ಸ್ಥಿರ (2011-12) ಬೆಲೆಯಲ್ಲಿ ಜಿಡಿಪಿ 36.22 ಲಕ್ಷ ಕೋಟಿ ರೂ.ಯಷ್ಟಿದೆ ಎಂದು ಅಂದಾಜಿಸಲಾಗಿದೆ. ಇದು 2019-20ರ ಇದೇ ತ್ರೈಮಾಸಿಕದಲ್ಲಿ 36.08 ಲಕ್ಷ ಕೋಟಿ ರೂ.ಗಳಷ್ಟಿದ್ದು, ಇದು ಶೇ 0.4ರಷ್ಟು ಬೆಳವಣಿಗೆ ತೋರಿಸುತ್ತದೆ ಎಂಬುದು ಸರ್ಕಾರ ಬಿಡುಗಡೆ ಮಾಡಿದ ದತ್ತಾಂಶಗಳಿಂದ ತಿಳಿದು ಬಂದಿದೆ. ಎಂಟು ಪ್ರಮುಖ ಕೈಗಾರಿಕೆಗಳ ಉತ್ಪಾದನೆಯು ಜನವರಿಯಲ್ಲಿ ಶೇ 0.1ರಷ್ಟು ಏರಿಕೆಯಾಗಿದೆ ಎಂದಿದೆ.
ಇದನ್ನೂ ಓದಿ: ಭಾರತದ ಟ್ಯಾಬ್ಲೆಟ್ ಮಾರುಕಟ್ಟೆ ಶೇ 14.7ರಷ್ಟು ಬೆಳವಣಿಗೆ: ದೇಶಿ ಪೇಟೆಯಲ್ಲಿ ಯಾರು ನಂ.1?
ಕಳೆದ ಆರ್ಥಿಕ ವರ್ಷದಲ್ಲಿದ್ದ ಶೇ 4.2ರಷ್ಟು ಬೆಳವಣಿಗೆಗೆ ಹೋಲಿಸಿದರೆ 2020-21ರಲ್ಲಿ ಭಾರತದ ಆರ್ಥಿಕತೆಯು ಕೋವಿಡ್ ಸಾಂಕ್ರಾಮಿಕ ಪ್ರೇರೇಪಿತ ಲಾಕ್ಡೌನ್ ಪ್ರಭಾವದಿಂದಾಗಿ ಶೇ 7.7ರಷ್ಟು ಕುಗ್ಗುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಜನವರಿಯಲ್ಲಿ ಬಿಡುಗಡೆ ಮಾಡಿದ್ದ ವರದಿಯಲ್ಲಿ ಅಂದಾಜಿಸಿತ್ತು.
ಜಿ 20 ರಾಷ್ಟ್ರಗಳ ಜಿಡಿಪಿ
ಅರ್ಜೆಂಟಿನಾ ಮೈನಸ್ ಶೇ 10.2ರಷ್ಟು
ಇಂಗ್ಲೆಂಡ್ ಮೈನಸ್ ಶೇ 7.8ರಷ್ಟು
ಭಾರತ ಶೇ 0.4ರಷ್ಟು
ಇಟಲಿ ಮೈನಸ್ ಶೇ 6.6ರಷ್ಟು
ದಕ್ಷಿಣ ಆಫ್ರಿಕಾ ಮೈನಸ್ ಶೇ 6.0ರಷ್ಟು
ಕೆನಡಾ ಮೈನಸ್ ಶೇ 5.2ರಷ್ಟು
ಫ್ರಾನ್ಸ್ ಮೈನಸ್ ಶೇ 5.0ರಷ್ಟು