ಕರ್ನಾಟಕ

karnataka

ETV Bharat / business

ಮೋದಿಯ 5 ಟ್ರಿಲಿಯನ್ ಆರ್ಥಿಕತೆ ಆಸೆ ಈಡೇರಲ್ಲ: ಮನಮೋಹನ್​ ಸಿಂಗ್ - ಆರ್ಥಿಕ ಬೆಳವಣಿಗೆ

2019-20ರ ಬಜೆಟ್​ ಮಂಡನೆಯ ವೇಳೆ ಎನ್​ಡಿಎ ಸರ್ಕಾರವು 2024ರ ವೇಳೆಗೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದುವ ಗುರಿ ಇರಿಸಿಕೊಂಡಿತ್ತು. ಈ ಬಗ್ಗೆ ಆರ್ಥಿಕ ತಜ್ಞ, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು, 'ಆರ್ಥಿಕ ಬೆಳವಣಿಗೆಯ ದರವು ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. 2024ರ ವೇಳೆಗೆ ಆರ್ಥಿಕತೆಯು 5 ಟ್ರಿಲಿಯನ್ ಡಾಲರ್​ಗೆ ಗುರಿ ತಲುಪುವ ಯಾವುದೇ ಭರವಸೆ ಇಲ್ಲ' ಎಂದಿದ್ದಾರೆ.

ಸಾಂದರ್ಭಿಕ ಚಿತ್ರ

By

Published : Oct 17, 2019, 7:02 PM IST

ಮುಂಬೈ: ಆರ್ಥಿಕ ಬೆಳವಣಿಗೆಯ ದರವು ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. 2024ರ ವೇಳೆಗೆ ಆರ್ಥಿಕತೆಯು 5 ಟ್ರಿಲಿಯನ್ ಡಾಲರ್​ಗೆ ಗುರಿ ತಲುಪುವ ಯಾವುದೇ ಭರವಸೆ ಇಲ್ಲ ಎಂದು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಮುಂಬೈನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, 2024ರ ವೇಳೆಗೆ 5 ಟ್ರಿಲಿಯನ್ ಡಾಲರ್ ಗುರಿ ತಲುಪುವ ಬಗ್ಗೆ ನಾನು ಸಾರ್ವಜನಿಕವಾಗಿ ಹೇಳಿದ್ದೇನೆ. 2018ರಲ್ಲಿ ಹೊಂದಿದ್ದ 2.7 ಟ್ರಿಲಿಯನ್ ಡಾಲರ್​ಗೆ ಹೋಲಿಸಿದರೆ, ವಾರ್ಷಿಕ ಶೇ. 10-12ರ ಬೆಳವಣಿಗೆಯ ದರ ಇದ್ದರೇ ಮಾತ್ರವೇ ಈ ಗುರಿ ತಲುಪಬಹುದು. ಬಿಜೆಪಿ ಆಡಳಿತದಲ್ಲಿ ಏನಾಗುತ್ತಿದೆ ಎಂದರೇ ವರ್ಷದಿಂದ ವರ್ಷಕ್ಕೆ ಬೆಳವಣಿಗೆಯ ದರದ ನಿರೀಕ್ಷೆಯು ಕುಸಿಯುತ್ತಿದೆ ಎಂದರು.

ಐಎಂಎಫ್ (ಅಂತಾರಾಷ್ಟ್ರೀಯ ಹಣಕಾಸು ನಿಧಿ) ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಬೆಳವಣಿಗೆಯ ದರವು ಕೇವಲ ಶೇ. 6.1ರಷ್ಟು ಮಾತ್ರ ಇರಲಿದೆ ಎಂದು ಅಂದಾಜಿಸಿದೆ. ಕೆಲವು ತಿಂಗಳ ಹಿಂದೆ ಅದು ಶೇ. 7.3ರಷ್ಟು ಇರಲಿದೆ ಎಂದು ಭವಿಷ್ಯ ನುಡಿದಿತ್ತು. ಬೆಳವಣಿಗೆಯ ದರವು ವರ್ಷದಿಂದ ವರ್ಷಕ್ಕೆ ಕುಸಿಯುತ್ತಿರುವಾಗ 2024ರ ವೇಳೆಗೆ ಆರ್ಥಿಕತೆಯು 5 ಟ್ರಿಲಿಯನ್ ಡಾಲರ್ ಗುರಿ ತಲುಪುವ ಯಾವುದೇ ಭರವಸೆ ಕಾಣಿಸುತ್ತಿಲ್ಲ ಎಂದು ಡಾ. ಮನಮೋಹನ್​ ಸಿಂಗ್​ ಹೇಳಿದರು.

ಕಳೆದ ತಿಂಗಳು ಜೈಪುರದ ಲಕ್ಷ್ಮಿಪತಿ ವಿವಿಯ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು, ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ತಲುಪಲು ಉತ್ತಮ ಕಲ್ಪನೆಯ ರಾಷ್ಟ್ರೀಯ ಕಾರ್ಯತಂತ್ರಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಒತ್ತಿ ಹೇಳಿದ್ದರು. 'ಪ್ರಸ್ತುತ ದೇಶದ ಆರ್ಥಿಕತೆಯು ನಿಧಾನಗತಿಯಲ್ಲಿ ಸಾಗುತ್ತಿದೆ. ಜಿಡಿಪಿ ದರ ಕುಸಿಯುತ್ತಿದೆ. ಹೂಡಿಕೆ ದರ ನಿಶ್ಚಲವಾಗಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಬ್ಯಾಂಕಿಂಗ್ ವ್ಯವಸ್ಥೆಯು ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ನಿರುದ್ಯೋಗ ಪ್ರಮಾಣ ಹೆಚ್ಚುತ್ತಿದೆ. ಭಾರತವನ್ನು ಐದು ಟ್ರಿಲಿಯನ್ ಡಾಲರ್​ಗೆ ತೆಗೆದುಕೊಂಡು ಹೋಗಲು ಉತ್ತಮ ಕಲ್ಪನೆಯ ರಾಷ್ಟ್ರೀಯ ತಂತ್ರ ಬೇಕು ಎಂದಿದ್ದರು.

ABOUT THE AUTHOR

...view details