ನವದೆಹಲಿ: ವಹಿವಾಟಿನ ಮೊತ್ತವನ್ನು ಪರಿಗಣಿಸದೇ ಕಾರ್ಪೊರೇಟ್ ತೆರಿಗೆಯನ್ನು ಶೇ 15ಕ್ಕೆ ಇಳಿಸಿ ಎಂದು ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.
ಆದಾಯ ಇಲಾಖೆ ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ನೇತೃತ್ವದಲ್ಲಿ ನಡೆದ 2020-21ರ ಬಜೆಟ್ ಪೂರ್ವ ಸಭೆಯಲ್ಲಿ ಸಿಐಐ ಪ್ರತಿನಿಧಿಗಳು ಭಾಗವಹಿಸಿ, 'ಎಲ್ಲ ಕಾರ್ಪೊರೇಟ್ ಕಂಪನಿಗಳ ಬೇಡಿಕೆಯನ್ನು ಉತ್ತೇಜಿಸಲು ಹಾಗೂ ಬೆಳವಣಿಗೆ ನೆರವಾಗಲು ಶೇ 15ರಷ್ಟು ತೆರಿಗೆ ಕಡಿತ ಮಾಡಬೇಕು. ಮುಂದಿನ ಮೂರು ವರ್ಷಗಳ ವರೆಗೆ ಮಾತ್ರ ಈ ತೆರಿಗೆ ವಿನಾಯಿತಿ ನೀಡುವಂತೆ ಪ್ರಸ್ತಾಪಿಸಿದರು'.
ಜೂನ್ ತಿಂಗಳ ಮಧ್ಯಾಂತರ ಬಜೆಟ್ಗೂ ಮುನ್ನ ನಡೆದ ಸಭೆಯಲ್ಲಿ ಸಿಐಐ ಸಾಂಸ್ಥಿಕ ತೆರಿಗೆಯನ್ನು ಶೇ 25ಕ್ಕೆ ಇಳಿಸುವಂತೆ ಕೋರಿತ್ತು. ಕೇಂದ್ರ ಸರ್ಕಾರ ಸೆಪ್ಟೆಂಬರ್ ತಿಂಗಳಲ್ಲಿ ಶೇ 30ರಷ್ಟಿದ್ದ ಕಾರ್ಪೊರೇಟ್ ತೆರಿಗೆಯನ್ನು ಶೇ 22ಕ್ಕೆ ಇಳಿಕೆ ಮಾಡಿತ್ತು. ಈಗ ಮತ್ತೆ ಶೇ 15ಕ್ಕೆ ತಗ್ಗಿಸುವಂತೆ ಬೇಡಿಕೆ ಇಟ್ಟಿದೆ.
ಬಳಕೆ, ಹೂಡಿಕೆ, ಸರ್ಕಾರಿ ವೆಚ್ಚ ಮತ್ತು ರಫ್ತು ವಹಿವಾಟಿಗೆ ಉತ್ತೇಜನ ನೀಡಲು ತೆರಿಗೆ ಹೊರೆ ತಗ್ಗಿಸುವ ಅಗತ್ಯವಿದೆ. ಕಾರ್ಪೊರೇಟ್ ಮತ್ತು ವೈಯಕ್ತಿಕ ಆದಾಯ ತೆರಿಗೆ ಇಳಿಸುವುದರಿಂದ ಹೂಡಿಕೆ ಚಟುವಟಿಕೆ ಮತ್ತು ಗ್ರಾಹಕ ಬಳಕೆ ಪ್ರಮಾಣದಲ್ಲಿ ಏರಿಕೆ ಕಂಡುಬರಲಿದೆ. ಆರ್ಥಿಕ ಪ್ರಗತಿಗೆ ವೇಗ ಸಿಗಲಿದೆ ಎಂದು ಸಿಐಐ ಸ್ಪಷ್ಟನೆ ನೀಡಿದೆ.