ನವದೆಹಲಿ:2023-24ರ ವೇಳೆಗೆ 1 ಬಿಲಿಯನ್ ಟನ್ ಕಲ್ಲಿದ್ದಲು ಉತ್ಪಾದನೆ ಗುರಿ ಸಾಧಿಸಿ ರಾಷ್ಟ್ರವನ್ನು ಕಲ್ಲಿದ್ದಲಿನಲ್ಲಿ ಆತ್ಮನಿರ್ಭರವನ್ನಾಗಿ ಮಾಡುವ ಉದ್ದೇಶ ಇರಿಸಿಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಸಿಐಎಲ್ ಆಯೋಜಿಸಿದ್ದ ಪಾಲುದಾರರ ಸಭೆಯಲ್ಲಿ ವಿಡಿಯೋ ಸಂವಾದ ಉದ್ದೇಶಿಸಿ ಮಾತನಾಡಿದ ಅವರು, ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ಕಲ್ಲಿದ್ದಲು ಸ್ಥಳಾಂತರಿಸುವಿಕೆ, ಮೂಲಸೌಕರ್ಯ, ಯೋಜನಾ ಅಭಿವೃದ್ಧಿ, ಶೋಧನೆ ಮತ್ತು ಶುದ್ಧ ಕಲ್ಲಿದ್ದಲು ತಂತ್ರಜ್ಞಾನಗಳಿಗೆ ಸಂಬಂಧಿಸಿದ ಸುಮಾರು 500 ಯೋಜನೆಗಳಲ್ಲಿ 1.22 ಲಕ್ಷ ಕೋಟಿ ರೂ. ಹೂಡಿಕೆ ಮಾಡಲಿದೆ ಎಂದು ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವರಾಗಿರುವ ಜೋಶಿ ತಿಳಿಸಿದರು.
ಕಂಪನಿಯ ವ್ಯವಹಾರಗಳಲ್ಲಿ ಎಲ್ಲ ಪಾಲುದಾರರ ಭಾಗವಹಿಸುವಿಕೆ ಮತ್ತು ಒಳಗೊಳ್ಳುವಿಕೆಯು ಯೋಜನೆಯ ಅಪಾಯಗಳನ್ನು ಕಡಿಮೆ ಮಾಡುತ್ತದೆ. ದ್ವಿಮುಖ ಸಂವಹನಗಳು ಪರಸ್ಪರ ಪ್ರಯೋಜನಕಾರಿಯಾದ ಹೊಸ ಆಲೋಚನೆಗಳು, ಸುಧಾರಣೆಗಳಿಗೆ ದಾರಿ ಮಾಡಿಕೊಡುತ್ತದೆ ಎಂದರು.
ಕೋಲ್ ಇಂಡಿಯಾ ಜತೆಗಿನ ವ್ಯಾಪಾರದ ಅವಕಾಶಗಳು ಅಪಾರವಾಗಿವೆ. ಕಂಪನಿಯು ತನ್ನ 49 ಮೊದಲ ಮೈಲಿ ಸಂಪರ್ಕ ಯೋಜನೆಗಳಿಗೆ ಎರಡು ಹಂತಗಳಲ್ಲಿ 2023-24ರ ವೇಳೆಗೆ ಸುಮಾರು 14,200 ಕೋಟಿ ರೂ. ಹೂಡಿಕೆ ಮಾಡಲಿದೆ. ಕಲ್ಲಿದ್ದಲು ಸಾರಿಗೆಯಲ್ಲಿ ಸುಧಾರಿತ ದಕ್ಷತೆ ತರಲು ರಸ್ತೆ ಸಾರಿಗೆಯ ಬದಲಿಗೆ ಕಂಪ್ಯೂಟರ್-ನೆರವಿನ ಲೋಡಿಂಗ್ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.
ಉದ್ದೇಶಿತ 1.22 ಲಕ್ಷ ಕೋಟಿ ರೂ. ವೆಚ್ಚದಲ್ಲಿ ಸಿಐಎಲ್ 2023-24ರ ಹೊತ್ತಿಗೆ ಕಲ್ಲಿದ್ದಲು ಸ್ಥಳಾಂತರಿಸುವಿಕೆಗೆ 32,696 ಕೋಟಿ ರೂ. ಗಣಿ ಮೂಲಸೌಕರ್ಯಕ್ಕೆ 25,117 ಕೋಟಿ ರೂ. ಯೋಜನಾ ಅಭಿವೃದ್ಧಿಗೆ 29,461 ಕೋಟಿ ರೂ. ವೈವಿಧ್ಯೀಕರಣ ಮತ್ತು ಶುದ್ಧ ಕಲ್ಲಿದ್ದಲು ತಂತ್ರಜ್ಞಾನಗಳ ಮೇಲೆ 32,199 ಕೋಟಿ ರೂ. ಸಾಮಾಜಿಕ ಮೂಲಸೌಕರ್ಯಕ್ಕೆ 1,495 ಕೋಟಿ ರೂ. ಮತ್ತು ಶೋಧನೆ ಕಾರ್ಯಗಳಿಗೆ 1,893 ಕೋಟಿ ರೂ. ವೆಚ್ಚ ಮಾಡಲಿದೆ ಎಂದು ವಿವರಿಸಿದರು.
ಮುಂದಿನ ವರ್ಷಗಳಲ್ಲಿ ಕಲ್ಲಿದ್ದಲು ಉತ್ಪಾದನೆಯನ್ನು ಹೆಚ್ಚಿಸುವ ಮತ್ತು ಕಲ್ಲಿದ್ದಲು ಆಮದು ಅವಲಂಬನೆ ಕಡಿಮೆ ಮಾಡುವ ಯೋಜನೆಯಲ್ಲಿ, ಗಣಿ ಅಭಿವೃದ್ಧಿ ಮತ್ತು ನಿರ್ವಾಹಕರು (ಎಂಡಿಒ) ಮಾದರಿಯಲ್ಲಿ ಕಾರ್ಯನಿರ್ವಹಿಸಲು ಕೋಲ್ ಇಂಡಿಯಾವು ಒಟ್ಟು 15 ಗ್ರೀನ್‌ಫೀಲ್ಡ್ ಯೋಜನೆಗಳನ್ನು ಗುರುತಿಸಿದೆ. ಅದು ಒಟ್ಟು ಸುಮಾರು 34,600 ಕೋಟಿ ರೂ. ಹೂಡಿಕೆ ಒಳಗೊಂಡಿರುತ್ತದೆ.
ಇದರಲ್ಲಿ 2024ರ ಹಣಕಾಸು ವರ್ಷದ ಅಂತ್ಯದ ವೇಳೆಗೆ ಸುಮಾರು 17,000 ಕೋಟಿ ರೂ. ಹೂಡಿಕೆಯ ಸಂಭವವಿದೆ. ಸ್ಥಳಾಂತರ ಮೂಲಸೌಕರ್ಯವು ಕೋಲ್ ಇಂಡಿಯಾವು ಆರ್ಥಿಕತೆಗೆ ಹೆಚ್ಚಿನ ಮೊತ್ತ ತುಂಬುವ ಮತ್ತೊಂದು ಪ್ರಮುಖ ಕ್ಷೇತ್ರವಾಗಿದೆ ಎಂದರು. ಪ್ರಮುಖ ರೈಲ್ವೆಗಳನ್ನು ಅಭಿವೃದ್ಧಿಪಡಿಸುವುದು (ಸುಮಾರು 13,000 ಕೋಟಿ ರೂ.) ರೈಲ್ವೆ ಸೈಡಿಂಗ್‌ಗಳು (ಸುಮಾರು 3,100 ಕೋಟಿ ರೂ.) ಮತ್ತು ಸ್ವಂತ ವ್ಯಾಗನ್‌ಗಳ ಖರೀದಿ (675 ಕೋಟಿ ರೂ.) ರೈಲ್ವೆ ಲಾಜಿಸ್ಟಿಕ್ಸ್‌ನಲ್ಲಿನ ಹೂಡಿಕೆಗಳು ಸೇರಿ 2023-24ನೇ ಹಣಕಾಸು ವರ್ಷದ ಹೊತ್ತಿಗೆ ಒಟ್ಟು 16,500 ಕೋಟಿ ರೂ. ಹೂಡಿಕೆ ಆಗಲಿದೆ.
ಕೋಲ್ ಇಂಡಿಯಾ ಮತ್ತು ಅದರ ಅಂಗಸಂಸ್ಥೆಗಳು ವಾರ್ಷಿಕವಾಗಿ 30,000 ಕೋಟಿ ರೂ. ವಿವಿಧ ರೀತಿಯ ಸರಕು, ಕಾಮಗಾರಿ ಮತ್ತು ಸೇವೆಗಳನ್ನು ಖರೀದಿಸುತ್ತವೆ. ಸರಕು, ಕಾಮಗಾರಿ ಮತ್ತು ಸೇವೆಗಳನ್ನು ನ್ಯಾಯಯುತ, ಪಾರದರ್ಶಕ ಮತ್ತು ನ್ಯಾಯಸಮ್ಮತ ರೀತಿ ಖರೀದಿಸುವ ಪ್ರಯತ್ನದಲ್ಲಿ ಕೋಲ್ ಇಂಡಿಯಾ ಹಲವು ಸುಧಾರಣೆಗಳನ್ನು ಮಾಡಿದೆ. ಮಾರಾಟಗಾರರು ಮತ್ತು ಪಾಲುದಾರರ 'ವ್ಯವಹಾರವನ್ನು ಸುಲಭಗೊಳಿಸಲು' ಮತ್ತು ಪಾರದರ್ಶಕತೆಯ ತತ್ವಗಳಿಗೆ ಬದ್ಧತೆ ಹೆಚ್ಚಿಸಲು ಕೈಪಿಡಿ ಮತ್ತು ಮಾರ್ಗಸೂಚಿಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.