ನವದೆಹಲಿ: ವಿದೇಶಿ ಹೂಡಿಕೆಗಳ ಆಕರ್ಷಣೆ ಮತ್ತು ದೇಶಿಯ ಕಲ್ಲಿದ್ದಲು ಉತ್ಪಾದನೆಯನ್ನು ಹೆಚ್ಚಿಸಲು ಕಲ್ಲಿದ್ದಲು ಗಣಿಗಾರಿಕೆ ಹರಾಜಿಗೆ ಸಂಬಂಧಿಸಿದ ಕಾನೂನುಗಳನ್ನು ಸರಳಗೊಳಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.
ಗಣಿಗಾರಿಕೆ ಸಂಬಂಧಿಸಿದ ಕಾನೂನುಗಳಿಗೆ ತಿದ್ದುಪಡಿ ತರುವ ಸುಗ್ರೀವಾಜ್ಞೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ, ಕಬ್ಬಿಣದ ಅದಿರು ಮತ್ತು ಇತರ ಖನಿಜಗಳ ಗಣಿಗಳ ಹರಾಜನ್ನು ಮಾರ್ಚ್ 31ರಂದು ಪ್ರಸ್ತುತ ಗಣಿಗಾರಿಕೆ ಗುತ್ತಿಗೆ ಅವಧಿ ಮುಗಿಯುವ ಮೊದಲು ಮುಕ್ತಾಯಗೊಳಿಸಲು ಅನುಮೋದನೆ ನೀಡಿದೆ. ಹೀಗಾಗಿ, ಇದೇ ವರ್ಷದ 31ರ ಒಳಗೆ ಗಣಿಗಳ ಹರಾಜು ನಡೆಸಲು ಅವಕಾಶ ಸಿಗಲಿದೆ.
ಕಲ್ಲಿದ್ದಲು ಕ್ಷೇತ್ರದಲ್ಲಿ ವಿದೇಶಿ ಹೂಡಿಕೆಯನ್ನು ಆಕರ್ಷಿಸುವ ಪ್ರಯತ್ನ ಇದಾಗಿದೆ. ಇಂಧನ ಆಮದು ಮಾಡಿಕೊಳ್ಳುವ ಪ್ರಮಾಣ ಕಡಿಮೆ ಮಾಡಲು ಸರ್ಕಾರ ಮುಂದಾಗಿದೆ ಎಂದು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.
ಕನಿಷ್ಠ ಮಾನದಂಡಗಳನ್ನು ಪೂರೈಸುವ ಯಾವುದೇ ಕಂಪನಿಯು ಈಗ ಕಲ್ಲಿದ್ದಲು ಗಣಿಗಳಿಗೆ ಬಿಡ್ ಸಲ್ಲಿಸಲು ಅನುಮತಿಸಲಾಗುವುದು. ಉದಾರೀಕೃತ ನಿಯಮಗಳ ಅಡಿಯಲ್ಲಿ ತಿಂಗಳ ಒಳಗೆ ಹರಾಜು ಪ್ರಕ್ರಿಯೆ ಶುರುವಾಗಲಿದೆ. ಹೊಸ ಸುತ್ತಿನಲ್ಲಿ 40 ಕಲ್ಲಿದ್ದಲು ಘಟಕಗಳನ್ನು ಹರಾಜಿಗೆ ಇಡಲಾಗುವುದು ಎಂದು ಕಲ್ಲಿದ್ದಲು ಕಾರ್ಯದರ್ಶಿ ಅನಿಲ್ ಕುಮಾರ್ ಜೈನ್ ತಿಳಿಸಿದರು
ಇದು ಮುಂದಿನ ದಿನಗಳಲ್ಲಿ ದಕ್ಷ ಇಂಧನ ಮಾರುಕಟ್ಟೆ ರಚನೆಗೆ ನೆರವಾಗಲಿದೆ. ಸ್ಪರ್ಧೆಯಲ್ಲಿ ತೊಡಗಿಸಿಕೊಳ್ಳಲು ಮತ್ತು ಕಲ್ಲಿದ್ದಲು ಆಮದು ಪ್ರಮಾಣ ತಗ್ಗಿಸಲಿದೆ ಎಂದರು. ಆದರೆ, ಇದರಿಂದ ಸರ್ಕಾರಿ ಸ್ವಾಮ್ಯದ ಕೋಲ್ ಇಂಡಿಯಾ ಲಿಮಿಟೆಡ್‌ನ ಏಕಸ್ವಾಮ್ಯ ಕೊನೆಗೊಳ್ಳುತ್ತದೆ.