ಮುಂಬೈ :340 ಕೋಟಿ ಡಾಲರ್ ಮೌಲ್ಯದ ಫ್ಯೂಚರ್ ಗ್ರೂಪ್‌ನ ಸ್ವತ್ತುಗಳನ್ನು ಖರೀದಿಸುವ ರಿಲಯನ್ಸ್ ಇಂಡಸ್ಟ್ರೀಸ್ ಯತ್ನಕ್ಕೆ ಹಿನ್ನಡೆಯಾಗಿದೆ. ಸ್ವತ್ತುಗಳನ್ನ ಮಾರಾಟ ಮಾಡಲು ಫ್ಯೂಚರ್ ಗ್ರೂಪ್ ಆರ್‌ಐಎಲ್‌ನೊಂದಿಗೆ ಮಾಡಿಕೊಂಡಿದ್ದ ಒಪ್ಪಂದಕ್ಕೆ ಸುಪ್ರೀಂಕೋರ್ಟ್ ತಡೆಯೊಡ್ಡಿದೆ. ಫ್ಯೂಚರ್ ಗ್ರೂಪ್‌ನ ಪಾಲುದಾರ ಸಂಸ್ಥೆಯಾಗಿರುವ ಅಮೆಜಾನ್ ಈ ಒಪ್ಪಂದವನ್ನು ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿತ್ತು.
ಸುಪ್ರೀಂಕೋರ್ಟ್‌ನ ಇಂದಿನ ಆದೇಶದಿಂದ ದೇಶದ ಅಗ್ರ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಮುಂಬೈ ಷೇರುಪೇಟೆಯಲ್ಲಿ ಆರ್‌ಐಎಲ್ ಷೇರುಗಳ ಮೌಲ್ಯ ಶೇ.2.6ರಷ್ಟು ಕುಸಿತ ಕಂಡಿವೆ.
ಪ್ರಕರಣದಲ್ಲಿ ಅಮೆಜಾನ್ ವ್ಯಕ್ತಪಡಿಸಿರುವ ಆಕ್ಷೇಪಗಳು ಅರ್ಹವಾಗಿವೆ ಎಂದು ಸುಪ್ರೀಂಕೋರ್ಟ್‌ನ ದ್ವಿಸದಸ್ಯ ಪೀಠವು ಹೇಳಿದೆ. ಪ್ರಪಂಚದ ಇಬ್ಬರು ಶ್ರೀಮಂತ ವ್ಯಕ್ತಿಗಳಾದ ಅಮೆಜಾನ್‌ನ ಜೆಫ್ ಬೆಜೋಸ್ ಮತ್ತು ರಿಲಯನ್ಸ್‌ನ ಮುಖೇಶ್ ಅಂಬಾನಿಗೆ ಸಂಬಂಧಿಸಿದ ಈ ತೀರ್ಪು ದೇಶದ ಶಾಪಿಂಗ್ ವಲಯದ ಮೇಲೆ ಪರಿಣಾಮ ಬೀರಲಿದೆ. ದೇಶದ ಚಿಲ್ಲರೆ ಮಾರುಕಟ್ಟೆ ಕ್ಷೇತ್ರದಲ್ಲಿ ರಿಲಯನ್ಸ್ ಪ್ರಾಬಲ್ಯವನ್ನು ಅಮೆಜಾನ್ ಕುಗ್ಗಿಸಲಿದೆಯೇ ಎಂಬ ಪ್ರಶ್ನೆಗಳನ್ನೂ ಹುಟ್ಟು ಹಾಕಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಇದನ್ನೂ ಓದಿ: ವಿದೇಶಿ ವಿನಿಮಯ ಕಾನೂನು ಉಲ್ಲಂಘನೆ ಆರೋಪ: ಫ್ಲಿಪ್‌ಕಾರ್ಟ್‌ಗೆ ಇಡಿ ನೋಟಿಸ್
ರಿಲಯನ್ಸ್ ಇಂಡಸ್ಟ್ರೀಸ್‌ಗೆ ಸ್ವತ್ತುಗಳನ್ನು ಮಾರಾಟ ಮಾಡಲು ಮುಂದಾಗಿದ್ದ ಫ್ಯೂಚರ್ ಗ್ರೂಪ್ ಸಂಸ್ಥೆ ಭಾರತದ ಪಾಲುದಾರ ಕಂಪನಿಯು ಒಪ್ಪಂದಗಳನ್ನು ಉಲ್ಲಂಘಿಸಿದೆ ಎಂದು ಅಮೆಜಾನ್ ಆರೋಪಿಸಿತ್ತು. ಆದರೆ, ರಿಲಯನ್ಸ್ ಜತೆಗಿನ ಒಪ್ಪಂದದಲ್ಲಿ ನಿಯಮ ಉಲ್ಲಂಘಿಸಿಲ್ಲ ಎಂದು ಸಮರ್ಥನೆ ಮಾಡಿಕೊಂಡಿತ್ತು.