ನವದೆಹಲಿ:ಕೊರೊನಾ ಭೀತಿಯಿಂದಾಗಿ ಭಾರತದಾದ್ಯಂತ ವಿಧಿಸಲಾದ ಲಾಕ್ಡೌನ್ ಪರಿಣಾಮವಾಗಿ ದೇಶದ ಸುಮಾರು 100ಕ್ಕೂ ಅಧಿಕ ನಗರಗಳಲ್ಲಿ ವಾಯುಮಾಲಿನ್ಯದ ಪ್ರಮಾಣವು ಗಣನೀಯವಾಗಿ ತಗ್ಗಿತ್ತು.
ಲಾಕ್ಡೌನ್ ಅನ್ನು ಹಂತ-ಹಂತವಾಗಿ ತೆರವುಗೊಳಿಸಿದ ಬಳಿಕ ಮತ್ತೆ ಗುಣಮಟ್ಟದಲ್ಲಿ ಕುಸಿತಕಂಡುಬಂದು ಸಿಟಿ ನಾಗರಿಕರು ಆತಂಕಕ್ಕೆ ಒಳಗಾಗುವಂತಾಯಿತು. ವಾಯುಗುಣಮಟ್ಟದ ಹೋರಾಟದ ಭಾಗವಾಗಿ 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಕೇಂದ್ರವು ಅನುದಾನ ಬಿಡುಗಡೆ ಮಾಡಿದೆ.
15ನೇ ಹಣಕಾಸು ಆಯೋಗದ ಶಿಫಾರಸುಗಳ ಆಧಾರದ ಮೇಲೆ ಸರ್ಕಾರವು 15 ರಾಜ್ಯಗಳಿಗೆ ತಮ್ಮ 10 ಲಕ್ಷ ಜನಸಂಖ್ಯೆ ಹೊಂದಿರುವ ನಗರಗಳಲ್ಲಿನ ವಾಯು ಗುಣಮಟ್ಟ ಸುಧಾರಣೆ ಕ್ರಮಗಳಿಗಾಗಿ ಮೊದಲ ಕಂತಿ 2,200 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಇದು ಫಲಾನುಭವಿ ರಾಜ್ಯಗಳಿಗೆ ತಮ್ಮ ಮಿಲಿಯನ್-ಪ್ಲಸ್ ನಗರಗಳು ಸ್ಥಳೀಯ ಸಂಸ್ಥೆಗಳ ಸಾಮರ್ಥ್ಯವನ್ನು ಹೆಚ್ಚಿಸುವುದು ಸೇರಿದಂತೆ ಗಾಳಿಯ ಗುಣಮಟ್ಟ ಸುಧಾರಣೆಗೆ ಯೋಜನೆ ಕೈಗೊಳ್ಳಲು ನೆರವಾಗಲಿದೆ ಎಂದಿದ್ದಾರೆ.
ಆಂಧ್ರಪ್ರದೇಶ (67.5 ಕೋಟಿ ರೂ), ಬಿಹಾರ (102 ಕೋಟಿ ರೂ), ಚತ್ತೀಸಗಢ (53.5 ಕೋಟಿ ರೂ), ಗುಜರಾತ್ (202.5 ಕೋಟಿ ರೂ), ಹರಿಯಾಣ ( 24 ಕೋಟಿ ರೂ), ಜಾರ್ಖಂಡ (79.5 ಕೋಟಿ ರೂ), ಕರ್ನಾಟಕ (139.5ಕೋಟಿ ರೂ), ಮಧ್ಯಪ್ರದೇಶ (145.5 ಕೋಟಿ ರೂ), ಮಹಾರಾಷ್ಟ್ರ (396.5 ಕೋಟಿ ರೂ), ಪಂಜಾಬ್ (45 ಕೋಟಿ ರೂ), ರಾಜಸ್ಥಾನ ( 140.5 ಕೋಟಿ ರೂ), ತಮಿಳುನಾಡು (116.5 ಕೋಟಿ ರೂ), ತೆಲಂಗಾಣ (117 ಕೋಟಿ ರೂ), ಉತ್ತರ ಪ್ರದೇಶ ( 357 ಕೋಟಿ ರೂ) ಮತ್ತು ಪಶ್ಚಿಮ ಬಂಗಾಳಕ್ಕೆ (209.5 ಕೋಟಿ ರೂ) ಸೇರಿ ಒಟ್ಟು 2,200 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.