ನವದೆಹಲಿ: ಸಾರ್ವಜನಿಕ ವಲಯದ ಸರ್ಕಾರಿ ಸ್ವಾಮ್ಯದ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ), 2020ರ ಜನವರಿ 1ರಿಂದ ಒನ್‌ಟೈಮ್ ಪಾಸ್‌ವರ್ಡ್ (ಒಟಿಪಿ) ಆಧಾರಿತ ಎಟಿಎಂ ನಗದು ಹಿಂಪಡೆಯುವ ಸೌಲಭ್ಯ ಪರಿಚಯಿಸಲಿದೆ.
ನೂತನ ಸೇವೆಯು ರಾತ್ರಿ ವೇಳೆ (ರಾತ್ರಿ 8 ಗಂಟೆಯಿಂದ ಬೆಳಗ್ಗೆ 8 ಗಂಟೆಯವರೆಗೆ) ಎಟಿಎಂನಿಂದ ಹಣ ಹಿಂತೆಗೆದುಕೊಳ್ಳುವಾಗ ಬ್ಯಾಂಕ್ನಲ್ಲಿ ನೋಂದಾಯಿಸಿದ ಮೊಬೈಲ್ ಸಂಖ್ಯೆಗೆ ಒಟಿಪಿ ನಂಬರ್ ರವಾನಿಸಲಾಗುತ್ತದೆ. ಈ ಸಂಖ್ಯೆ ನಮೋದಿಸಿದರೆ ಮಾತ್ರವೇ ಎಟಿಎಂನಿಂದ ಹಣ ಡ್ರಾ ಮಾಡಿಕೊಳ್ಳಬಹುದು.
ಈ ಸೇವೆಯು ಎಸ್‌ಬಿಐ ಎಟಿಎಂಗಳಿಗೆ ಮಾತ್ರ ಅನ್ವಯಿಸಲಿದೆ. ಇತರ ಬ್ಯಾಂಕ್ಗಳ ಎಟಿಎಂಗಳು ಈ ಹಿಂದಿನಂತೆ ಕಾರ್ಯನಿರ್ವಹಸಲಿವೆ.
ಎಟಿಎಂಗಳಲ್ಲಿ ನಡೆಯುತ್ತಿರುವ ಅನಧಿಕೃತ ವಹಿವಾಟುಗಳ ಪ್ರಕರಣಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, 10,000 ರೂ.ಗಿಂತ ಹೆಚ್ಚಿನ ವಹಿವಾಟುಗಳಿಗೆ ಒಟಿಪಿ ಆಧಾರಿತ ಸೇವೆ ಒದಗಿಸಲಾಗುತ್ತಿದೆ. ಈ ಸೇವೆಯನ್ನು ರಾತ್ರಿ 8ರಿಂದ ಬೆಳಗ್ಗೆ 8ರ ವರೆಗೆ ಚಾಲ್ತಿಯಲ್ಲಿರುತ್ತದೆ ಎಂದು ಎಸ್‌ಬಿಐ ಪ್ರಕಟಣೆಯಲ್ಲಿ ಹೇಳಿದೆ.
ಒಟಿಪಿ ಆಧಾರಿತ ನಗದು ಹಿಂತೆಗೆದುಕೊಳ್ಳುವ ಸೌಲಭ್ಯವನ್ನು ಪರಿಚಯಿಸುವುದರೊಂದಿಗೆ ಎಸ್‌ಬಿಐ ಗ್ರಾಹಕರು ಹಿಂಪಡೆಯುವ ಹಣಕ್ಕೆ ಮತ್ತಷ್ಟು ಭದ್ರತೆ ಕಲ್ಪಿಸಿದೆ. ಬ್ಯಾಂಕ್ನಲ್ಲಿ ನೋಂದಾಯಿಸಲಾದ ಗ್ರಾಹಕರ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಲಾಗುತ್ತದೆ. ಬಳಿಕ ಈ ನಂಬರ್ ನಮೋದಿಸಿ ಹಣ ಪಡೆಯಬಹುದು ಎಂದು ತಿಳಿಸಿದೆ.