ಮುಂಬೈ: ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಉದ್ಯಮಿ ದಿಗ್ಗಜ ರತನ್ ಟಾಟಾ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಫೋಟೋಗಳು ಟ್ವಿಟ್ಟರ್ನಲ್ಲಿ ಸದ್ದು ಮಾಡುತ್ತಿವೆ.
ಈ ಇಬ್ಬರೂ ಉದ್ಯಮಿ ದಿಗ್ಗಜರು ಮುಂಬೈನಲ್ಲಿ ನಡೆದ ವಾರ್ಷಿಕ ಟೈಕೋನ್ (TiEcon) ಕಾರ್ಯಕ್ರಮದಲ್ಲಿ ಜಂಟಿಯಾಗಿ ವೇದಿಕೆ ಹಂಚಿಕೊಂಡಿದ್ದರು. ನಾರಾಯಣ ಮೂರ್ತಿ ಅವರು ರತನ್ ಟಾಟಾ ಅವರಿಗೆ ಪ್ರಶಸ್ತಿ ನೀಡುವ ಮೊದಲು ಅವರ ಪಾದಕ್ಕೆ ನಮಸ್ಕರಿಸಿ ಬಳಿಕ ಪ್ರಶಸ್ತಿ ನೀಡಿ ಗೌರವಿಸಿದ್ದರು. ಉದ್ಯಮಿಗಳ ಈ ಸಾಂಪ್ರದಾಯಿಕ ನಡೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
"ನಮ್ರತೆಯ ಸ್ಪರ್ಶದ ಸೂಚಕದ"ನ ಚಿತ್ರಗಳನ್ನು ಟ್ವಿಟ್ಟರ್ನಲ್ಲಿ ಕಾರ್ಯಕ್ರಮ ಸಂಘಟಕರು ಹಂಚಿಕೊಂಡಿದ್ದಾರೆ. 'ಇನ್ಫೋಸಿಸ್ನ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಟಾಟಾ ಸನ್ಸ್ ಮುಖ್ಯಸ್ಥ ರತನ್ ಟಾಟಾ ಅವರಿಂದ ಟೈಕೋನ್ ಮುಂಬೈ ಕಾರ್ಯಕ್ರಮದಲ್ಲಿ ಆಶೀರ್ವಾದ ಪಡೆಯುತ್ತಿದ್ದಾರೆ. ಇದು ನಮ್ರತೆಯ ಸ್ಪರ್ಶದ ಸೂಚಕ ಮತ್ತು ಅತ್ಯಮೂಲ್ಯವಾದ ಐತಿಹಾಸಿಕ ಕ್ಷಣಗಳು' ಎಂದು ಆಯೋಜಕರು ಬರೆದುಕೊಂಡಿದ್ದಾರೆ.