ಮುಂಬೈ:ಷೇರು ಮಾರುಕಟ್ಟೆಯ ಭಾರಿ ಕುಸಿತದಿಂದಾಗಿ ಭಾರತದ ಅತ್ಯಂತ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿಯ ನಿವ್ವಳ ಮೌಲ್ಯವು ಕಳೆದ ಎರಡು ತಿಂಗಳ ಮಾರ್ಚ್ 31ರ ಅಂತ್ಯಕ್ಕೆ ನಿತ್ಯ ಶೇ 28ರಷ್ಟು ಅಥವಾ 300 ಮಿಲಿಯನ್ ಡಾಲರ್ ಕುಸಿತದ ಮುಖೇನ 48 ಬಿಲಿಯನ್ ಡಾಲರ್ಗೆ ಇಳಿದಿದೆ ಎಂದು ವರದಿ ತಿಳಿಸಿದೆ.
ವಿವಿಧ ಉದ್ಯಮಗಳ ರಿಲಯನ್ಸ್ ಇಂಡಸ್ಟ್ರೀಸ್ನ ಅಧ್ಯಕ್ಷ/ ವ್ಯವಸ್ಥಾಪಕ ನಿರ್ದೇಶಕರ ಸಂಪತ್ತು 19 ಬಿಲಿಯನ್ ಡಾಲರ್ಗೆ (1.44 ಲಕ್ಷ ಕೋಟಿ ರೂ.) ಇಳಿದಿದೆ. ಜಾಗತಿಕ ಶ್ರೀವಂತರ ಶ್ರೇಯಾಂಕದಲ್ಲಿ ಎಂಟು ಸ್ಥಾನಗಳು ಕಳೆದುಕೊಂಡು 17ನೇ ಸ್ಥಾನಕ್ಕೆ ತಲುಪಿದ್ದಾರೆ ಎಂದು ಹುರುನ್ ಗ್ಲೋಬಲ್ ರಿಚ್ ಲಿಸ್ಟ್ ಹೇಳಿದೆ.
ಭಾರತದ ಇತರ ಉದ್ಯಮಿಗಳ ಸಂಪತ್ತಿನ ಕುಸಿತ ಕಂಡಿದ್ದು, ಗೌತಮ್ ಅದಾನಿ ಅವರ ಸಂಪತ್ತು 6 ಬಿಲಿಯನ್ ಡಾಲರ್ ಅಥವಾ 37 ಪ್ರತಿಶತದಷ್ಟು ಕ್ಷೀಣಿಸಿದೆ. ಎಚ್‌ಸಿಎಲ್ ಟೆಕ್ನಾಲಜೀಸ್‌ನ ಶಿವ ನಾಡರ್ 5 ಬಿಲಿಯನ್ ಡಾಲರ್ ಅಥವಾ ಶೇ 26ರಷ್ಟು ಮತ್ತು ಬ್ಯಾಂಕರ್ ಉದ್ಯಮಿ ಉದಯ್ ಕೋಟಕ್ ಅವರ ಸಂಪತ್ತಿನಲ್ಲಿ 4 ಬಿಲಿಯನ್ ಡಾಲರ್ ಶೇ 28ರಷ್ಟು ತಗ್ಗಿದೆ.
ವಿಶ್ವದ ಅಗ್ರ 100 ಶ್ರೀಮಂತ ಉದ್ಯಮಿಗಳ ಪಟ್ಟಿಯಿಂದ ಮೇಲಿನ ಮೂವರು ಹೊರಗುಳಿದಿದ್ದು, ಅಂಬಾನಿ ಒಬ್ಬರೇ ಇದರಲ್ಲಿ ಸ್ಥಾನ ಪಡೆದ ಭಾರತೀಯ ಉದ್ಯಮಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕಂಪನಿಗಳ ಮೇಲೆ ಕೋವಿಡ್-19 ಸಾಂಕ್ರಾಮಿಕ ರೋಗದ ಪ್ರಭಾವವು ಜಾಗತಿಕ ಆರ್ಥಿಕ ಕುಸಿತ ಹಾಗೂ ಮಾರಾಟ ಒತ್ತಡಕ್ಕೆ ಕಾರಣವಾಗಿದ್ದರಿಂದ ಕಳೆದ ಎರಡು ತಿಂಗಳಲ್ಲಿ ಭಾರತೀಯ ಮಾರುಕಟ್ಟೆ ಶೇ 25ರಷ್ಟು ಕ್ಷೀಣಿಸಿದೆ.
ಭಾರತದ ಅಗ್ರ ಉದ್ಯಮಿಗಳ ಸಂಪತ್ತಿನಲ್ಲಿ ಶೇ 26ರಷ್ಟು ಕುಸಿತವಾಗಿದೆ. ಅಮೆರಿಕದ ಡಾಲರ್ಗೆ ಹೋಲಿಸಿದರೆ ಷೇರು ಮಾರುಕಟ್ಟೆಗಳು ಮತ್ತು ರೂಪಾಯಿ ಮೌಲ್ಯದಲ್ಲಿ ಶೇ 5.2ರಷ್ಟು ಕುಸಿತ ಕಂಡಿದೆ. ಮುಖೇಶ್ ಅಂಬಾನಿಗೆ ಇದು ಚಂಡಮಾರುತದಂತೆ ಅಪ್ಪಳಿಸಿದೆ. ಅವರ ಒಟ್ಟಾರೆ ಸಂಪತ್ತಿನಲ್ಲಿ ಶೇ 28ರಷ್ಟು ಕಡಿಮೆಯಾಗಿದೆ ಎಂದು ಹುರುನ್ ರಿಪೋರ್ಟ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅನಸ್ ರೆಹಮಾನ್ ಹೇಳಿದ್ದಾರೆ.
ಫ್ರೆಂಚ್ ಫ್ಯಾಷನ್ ದೈತ್ಯ ಎಲ್‌ವಿಎಂಹೆಚ್‌ನ ಮುಖ್ಯ ಕಾರ್ಯನಿರ್ವಾಹಕ ಬರ್ನಾರ್ಡ್ ಅರ್ನಾಲ್ಟ್ ನಂತರ ಅಂಬಾನಿ ಜಾಗತಿಕವಾಗಿ ಎರಡನೇ ಅತಿ ಹೆಚ್ಚು ಸಂಪತ್ತು ಕಳೆದುಕೊಂಡವರಲ್ಲಿ ಒಬ್ಬರಾಗಿದ್ದಾರೆ. ಅರ್ನಾಲ್ಟ್ ಅವರ ಸಂಪತ್ತಿನಲ್ಲಿ ಶೇ 28ರಷ್ಟು ಅಥವಾ 30 ಬಿಲಿಯನ್ ಡಾಲರ್‌ಗಳಷ್ಟು ಇಳಿದು 77 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ.