ನವದೆಹಲಿ :ಭಾರತೀಯ ರೈಲ್ವೆಯು ಕೋವಿಡ್-19 ವಿರುದ್ಧದ ಸಮರದಲ್ಲಿ ಯಾವುದೇ ಪ್ರಯತ್ನಗಳನ್ನು ಕೈಗೊಳ್ಳುವುದರಲ್ಲೂ ಹಿಂದೆ ಬೀಳುತ್ತಿಲ್ಲ.
ಒಂದೆಡೆ ರೈಲ್ವೆ ದೇಶದ ನಾನಾ ಭಾಗಗಳಿಂದ ಭರ್ತಿಮಾಡಿದ ಆಕ್ಸಿಜನ್ ಟ್ಯಾಂಕರ್ಗಳನ್ನು ಆಕ್ಸಿಜನ್ ಎಕ್ಸ್ ಪ್ರೆಸ್ ರೈಲುಗಳ ಮೂಲಕ ತ್ವರಿತವಾಗಿ ಸಾಗಿಸುವ ಕೆಲಸ ಮಾಡಿದರೆ, ಮತ್ತೊಂದೆಡೆ ಅದು ಪ್ರಯಾಣಿಕರು ಮತ್ತು ಸರಕು ಸಾಗಣೆ ಸಂಚಾರ ಕಾರ್ಯವನ್ನು ಮುಂದುವರಿಸಿದೆ. ಇದೇ ವೇಳೆ ರೈಲ್ವೆ ತನ್ನೊಳಗಿನ ವೈದ್ಯಕೀಯ ಸೌಕರ್ಯಗಳನ್ನು ವೃದ್ಧಿಸುವ ಕಾರ್ಯವನ್ನೂ ಮಾಡುತ್ತಿದೆ.
ಭಾರತದಾದ್ಯಂತ 86 ರೈಲ್ವೆ ಆಸ್ಪತ್ರೆಗಳಲ್ಲಿ ಬೃಹತ್ ಪ್ರಮಾಣದ ಸಾಮರ್ಥ್ಯವೃದ್ಧಿ ಕಾರ್ಯ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ 4 ಆಕ್ಸಿಜನ್ ಘಟಕಗಳು ಕಾರ್ಯಾರಂಭ ಮಾಡಿವೆ.
52ಕ್ಕೆ ಅನುಮೋದನೆ ನೀಡಲಾಗಿದೆ ಮತ್ತು 30 ಘಟಕಗಳ ಸ್ಥಾಪನೆಗೆ ಪ್ರಕ್ರಿಯೆ ನಾನಾ ಹಂತದಲ್ಲಿ ಪ್ರಗತಿಯಲ್ಲಿದೆ. ರೈಲ್ವೆಯ ಎಲ್ಲ ಕೋವಿಡ್ ಆಸ್ಪತ್ರೆಗಳನ್ನು ಆಕ್ಸಿಜನ್ ಘಟಕಗಳೊಂದಿಗೆ ಸಜ್ಜುಗೊಳಿಸಲಾಗುತ್ತಿದೆ.
ಇದನ್ನೂ ಓದಿ: ಕೊರೊನಾ ವರ್ಷದಲ್ಲೂ 13.41 ಶತಕೋಟಿ ಡಾಲರ್ ಗಳಿಸಿದ ಭಾರತೀಯ ಐಟಿ ಸೇವೆ
ಆಕ್ಸಿಜನ್ ಉತ್ಪಾದನಾ ಘಟಕಗಳಿಗೆ ಪ್ರತಿ ಪ್ರಕರಣದಲ್ಲಿ 2 ಕೋಟಿ ರೂ.ವರೆಗೆ ಅನುಮೋದನೆ ನೀಡಲು ವ್ಯವಸ್ಥಾಪಕ ನಿರ್ದೇಶಕರಿಗೆ ಮತ್ತಷ್ಟು ಅಧಿಕಾರ ನಿಯೋಜನೆ ಮಾಡಿದೆ.
ಇದಲ್ಲದೆ ಹಲವು ಸರಣಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೋವಿಡ್ ಚಿಕಿತ್ಸಾ ಹಾಸಿಗೆಗಳ ಸಂಖ್ಯೆಯನ್ನು 2539ರಿಂದ 6972ಕ್ಕೆ ಹೆಚ್ಚಿಸಲಾಗಿದೆ. ಕೋವಿಡ್ ಆಸ್ಪತ್ರೆಗಳಲ್ಲಿ ಐಸಿಯು ಹಾಸಿಗೆಗಳ ಸಂಖ್ಯೆಯನ್ನು 273 ರಿಂದ 573ಕ್ಕೆ ಏರಿಕೆಯಾಗಿದೆ.
ಇನ್ ವೇಸಿವ್ ವೆಂಟಿಲೇಟರ್ಗಳ ಹೆಚ್ಚಿನ ಸೇರ್ಪಡೆ ಮಾಡಲಾಗುತ್ತಿದೆ. ಅವುಗಳ ಸಂಖ್ಯೆ 62ರಿಂದ 296ಕ್ಕೆ ಏರಿಕೆಯಾಗಿದೆ. ಬಿಪಾಪ್ ಯಂತ್ರಗಳು, ಆಕ್ಸಿಜನ್ ಸಾಂದ್ರಕಗಳು, ಆಕ್ಸಿಜನ್ ಸಿಲಿಂಡರ್ ಇತ್ಯಾದಿ ಗಂಭೀರ ವೈದ್ಯಕೀಯ ಸಾಧನಗಳನ್ನು ರೈಲ್ವೆ ಆಸ್ಪತ್ರೆಗಳಲ್ಲಿ ಹೆಚ್ಚಿಸಲು ನಿರಂತರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಅಲ್ಲದೆ ರೈಲ್ವೆ, ಕೋವಿಡ್ ಬಾಧಿತ ಸಿಬ್ಬಂದಿಗೆ ತನ್ನಲ್ಲಿ ಮಾನ್ಯತೆ ಪಡೆದ ಇತರೆ ಆಸ್ಪತ್ರೆಗಳಲ್ಲಿ ಅಗತ್ಯಕ್ಕೆ ತಕ್ಕಂತೆ ರೆಫರಲ್ ಆಧಾರದ ಮೇಲೆ ಪ್ರವೇಶ ದಾಖಲಾಗಿ ಚಿಕಿತ್ಸೆ ಪಡೆಯುವಂತೆ ನಿರ್ದೇಶನ ನೀಡಿದೆ.