ಲಂಡನ್:ಮದ್ಯೋದ್ಯಮಿ ವಿಜಯ್ ಮಲ್ಯ ತಮ್ಮನ್ನು ಭಾರತಕ್ಕೆ ಹಸ್ತಾಂತರಿಸುವುದರ ವಿರುದ್ಧ ಇಂಗ್ಲೆಂಡ್ (ಯುಕೆ) ಸುಪ್ರೀಂಕೋರ್ಟ್ಗೆ ಮನವಿ ಸಲ್ಲಿಸಲು ಇಲ್ಲಿನ ಹೈಕೋರ್ಟ್ ಅವಕಾಶ ಕಲ್ಪಿಸಲಿಲ್ಲ.
ಕಳೆದ ತಿಂಗಳಷ್ಟೇ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಆದೇಶದ ವಿರುದ್ಧದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿತ್ತು. ಇಂದು ಲಂಡನ್ ನ್ಯಾಯಾಲಯದಲ್ಲಿ ಉದ್ಯಮಿಗೆ ಮತ್ತೊಂದು ಹಿನ್ನಡೆಯಾಗಿದೆ. ಯುಕೆ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಆಸೆಯಲ್ಲಿದ್ದ ಅವರಿಗೆ ನಿರಾಶೆಯಾಗಿದೆ. ಇದರಿಂದಾಗಿ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸೋದು ಬಹುತೇಕ ಖಚಿತವಾದಂತಿದೆ.
ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಇಂಗ್ಲೆಂಡ್ ವ್ಯವಸ್ಥೆಯು ಸ್ವಲ್ಪ ವಿಭಿನ್ನವಾಗಿದೆ. ಮಲ್ಯ ಅವರು ಮತ್ತೆ ಹೈಕೋರ್ಟ್ ಮೂಲಕವೇ ಉನ್ನತ ನ್ಯಾಯಾಲಯದ ಕದ ತಟ್ಟಬೇಕಿದೆ. ಸುಪ್ರೀಂಗೆ ಏಕೆ ಸಂಪರ್ಕಿಸಬೇಕು? ಅವಶ್ಯಕತೆ ಏನಿದೆ? ಎಂಬುದನ್ನು ಮಲ್ಯ ಹೈಕೋರ್ಟ್ಗೆ ಮನವರಿಕೆ ಮಾಡಬೇಕು.