ಬೀಜಿಂಗ್: ಅಮೆರಿಕ ಮತ್ತು ಚೀನಾ ನಡುವೆ ತಾರಕಕ್ಕೆ ಏರಿದ್ದ ವ್ಯಾಪಾರ ಯುದ್ಧ 18 ತಿಂಗಳ ಬಳಿಕ ತಣ್ಣಗಾಗುತ್ತಿದೆ. 'ಮೊದಲ ಹಂತದ ವ್ಯಾಪಾರ ಒಪ್ಪಂದದ ಕುರಿತು ಉಭಯ ರಾಷ್ಟ್ರಗಳು ಐತಿಹಾಸಿಕ ಒಪ್ಪಂದಕ್ಕೆ ಬಂದಿವೆ' ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಬೌದ್ಧಿಕ ಆಸ್ತಿ ಹಕ್ಕು, ತಂತ್ರಜ್ಞಾನದ ವರ್ಗಾವಣೆ, ಕೃಷಿ, ಹಣಕಾಸು ಸೇವೆಗಳು, ಕರೆನ್ಸಿ ಹಾಗೂ ವಿದೇಶಿ ವಿನಿಮಯ ಕ್ಷೇತ್ರಗಳಲ್ಲಿ ಆರ್ಥಿಕ ಮತ್ತು ವ್ಯಾಪಾರದ ಆಡಳಿತಕ್ಕೆ ರಚನಾತ್ಮಕ ಸುಧಾರಣೆಗಳ ಅಗತ್ಯವಿದೆ ಎಂಬುದನ್ನು ಉಭಯ ದೇಶಗಳು ಮನವರಿಕೆ ಮಾಡಿಕೊಂಡಿವೆ.
ಚೀನಾದೊಂದಿಗೆ ಬಹು ದೊಡ್ಡದಾದ ಒಪ್ಪಂದಕ್ಕೆ ನಾವು ಒಪ್ಪಿದ್ದೇವೆ. ಅವರು ಅನೇಕ ರಚನಾತ್ಮಕ ಬದಲಾವಣೆಗಳು ಮತ್ತು ಕೃಷಿ ಉತ್ಪನ್ನ, ಇಂಧನ ಮತ್ತು ತಯಾರಿಕ ಸರಕುಗಳ ಬೃಹತ್ ಪ್ರಮಾಣದ ಖರೀದಿಗೆ ಒಪ್ಪಿಕೊಂಡಿದ್ದಾರೆ. ಇದರ ಜೊತೆಗೆ ಇನ್ನೂ ಹೆಚ್ಚಿನವುಗಳಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರಣಿ ಟ್ವೀಟ್ ಮಾಡಿದ್ದಾರೆ.
ಶೇ. 25ರಷ್ಟು ಸುಂಕಗಳು, ಉಳಿದಂತೆ 7.5 ಪ್ರತಿಶತದಷ್ಟು ಸುಂಕ ಯಥಾವತ್ತಾಗಿ ಉಳಿದಿವೆ. ಡಿಸೆಂಬರ್ 15ಕ್ಕೆ ನಿಗದಿಪಡಿಸಿದ ದಂಡದ ಸುಂಕ ವಿಧಿಸಲಾಗುವುದಿಲ್ಲ. ಏಕೆಂದರೆ ನಾವು ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ.
2020ರ ಚುನಾವಣೆಯ ನಂತರ ಕಾಯುವ ಬದಲು ಎರಡು ಹಂತದ ಒಪ್ಪಂದದ ಕುರಿತು ಮಾತುಕತೆಯನ್ನು ತಕ್ಷಣ ಆರಂಭಿಸುತ್ತೇವೆ. ಇದು ಎಲ್ಲರಿಗೂ ಅದ್ಭುತವಾದ ವ್ಯವಹಾರವಾಗಿದೆ. ಧನ್ಯವಾದಗಳು! ಎಂದು ಟ್ರಂಪ್ ಬರೆದುಕೊಂಡಿದ್ದಾರೆ.