ಮುಂಬೈ(ಮಹಾರಾಷ್ಟ್ರ): ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ಬ್ಯಾಂಕಿಂಗ್ ಕ್ಷೇತ್ರದಲ್ಲಿ ಈಗಾಗಲೇ ಅನೇಕ ರೀತಿಯ ಹೊಸ ಬದಲಾವಣೆ ತಂದಿದ್ದು, ಇದೀಗ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಇದರಿಂದ ಬ್ಯಾಂಕ್ ಗ್ರಾಹಕರಿಗೆ ಈ ಹಿಂದೆ ಆಗುತ್ತಿದ್ದ ಕಿರಿಕಿರಿ ತಪ್ಪಿಸಿದಂತಾಗುತ್ತದೆ.
ಆಗಸ್ಟ್ 1ರಿಂದಲೇ ಎಟಿಎಂ ವಿನಿಮಯ ಶುಲ್ಕ ಹೆಚ್ಚಳ ಮಾಡಿ ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಿದ್ದ ಆರ್ಬಿಐ ಇದೀಗ ಬ್ಯಾಂಕ್ಗಳಿಗೆ ಶಾಕಿಂಗ್ ನ್ಯೂಸ್ ನೀಡಿದೆ. ಇದೀಗ ಆರ್ಬಿಐ ಹೊಸ ನಿಯಮದ ಪ್ರಕಾರ ಬರುವ ಅಕ್ಟೋಬರ್ ತಿಂಗಳಿಂದ ಬ್ಯಾಂಕ್ನ ಎಲ್ಲ ಎಟಿಎಂಗಳಲ್ಲಿ ಕಡ್ಡಾಯವಾಗಿ ಹಣ ಇರಲೇಬೇಕು. ಇದರಲ್ಲಿ ಬ್ಯಾಂಕ್ಗಳು ವಿಫಲವಾದರೆ 10 ಸಾವಿರ ರೂ. ದಂಡ ಕಟ್ಟಬೇಕಾಗುತ್ತದೆ.
ಎಟಿಎಂ ಮೂಲಕ ಹಣ ವಿತ್ ಡ್ರಾ ಮಾಡುವ ಗ್ರಾಹಕರಿಗೆ ಆಗುತ್ತಿದ್ದ ತೊಂದರೆ ತಪ್ಪಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಎಟಿಎಂನಲ್ಲಿ ಇನ್ಮುಂದೆ ಹಣವಿಲ್ಲದಿದ್ದರೆ ಆರ್ಬಿಐಗೆ 10 ಸಾವಿರ ರೂಪಾಯಿ ದಂಡ ಕಟ್ಟಬೇಕಾಗುತ್ತದೆ. ಆರ್ಬಿಐ ಇದಕ್ಕೆ ಸಂಬಂಧಿಸಿದಂತೆ ಮಹತ್ವದ ಸುತ್ತೋಲೆ ಹೊರಡಿಸಿದೆ. ವಿವಿಧ ಬ್ಯಾಂಕ್ಗಳ ಎಟಿಎಂನಲ್ಲಿ ನಗದು ಹಣ ಖಾಲಿಯಾದ ಬಳಿಕ ಕೂಡ ಅವುಗಳಲ್ಲಿ ಬ್ಯಾಂಕ್ ಹಣ ತುಂಬುತ್ತಿಲ್ಲ. ಇದರಿಂದ ಅನೇಕ ಗ್ರಾಹಕರು ತೊಂದರೆಗೊಳಗಾಗುತ್ತಿದ್ದು, ಅದನ್ನ ತಪ್ಪಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಇದನ್ನೂ ಓದಿರಿ: ಗ್ರಾಹಕರ ಗಮನಕ್ಕೆ: ಇಂದಿನಿಂದ ಎಟಿಎಂ ವಿನಿಮಯ ಶುಲ್ಕ ಹೆಚ್ಚಳ
ಎಟಿಂಎಗಳಿಗೆ ತೆರಳಿದಾಗ ಅಲ್ಲಿ ಕ್ಯಾಶ್ ಇಲ್ಲ ಎಂದು ತೋರಿಸಿದಾಗ ಈ ನಿಯಮ ಅನ್ವಯವಾಗಲಿದ್ದು, ಆರ್ಬಿಐ ನಿಯೋಜಿತ ಅಧಿಕಾರಿಗಳು ಇದರ ಮೇಲೆ ಕೆಲಸ ಮಾಡಲಿದ್ದಾರೆ. ಆಗಸ್ಟ್ 1ರಿಂದಲೇ ಬೇರೆ ಬ್ಯಾಂಕಿನ ಎಟಿಎಂ ಮೂಲಕ ವಿತ್ ಡ್ರಾ ಮಾಡುವ ಪ್ರತಿಯೊಂದು ಹಣಕಾಸು ವಹಿವಾಟಿನಲ್ಲೂ ಎಟಿಎಂ ಇಂಟರ್ಚೇಂಜ್ ಶುಲ್ಕವನ್ನು 15 ರಿಂದ 17 ರೂ.ಗೆ ಹೆಚ್ಚಿಸಿದೆ.