ಕರ್ನಾಟಕ

karnataka

ETV Bharat / business

ಬಡ್ಡಿದರ ಕಡಿತ, ಇಎಂಐ ವಿನಾಯತಿ: ಬ್ಯಾಂಕ್​ ಎಂಡಿಗಳ ಜತೆ RBI ಗವರ್ನರ್​​ ಪ್ರಗತಿ ಪರಿಶೀಲನೆ

ಪ್ರಸ್ತುತ ಆರ್ಥಿಕ ಪರಿಸ್ಥಿತಿಯ ವಿಮರ್ಶೆ, ಹಣಕಾಸು ಕ್ಷೇತ್ರದ ಸ್ಥಿರತೆ ಕುರಿತು ಚರ್ಚಿಸಲಾಯಿತು. ಲಾಕ್​ಡೌನ್ ವೇಳೆ ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್​ಗಳ ಕಾರ್ಯವನ್ನು ಶಕ್ತಿಕಾಂತ್ ದಾಸ್ ಶ್ಲಾಘಿಸಿದ್ದಾರೆ.

Shaktikanta Das
ಶಕ್ತಿಕಾಂತ್ ದಾಸ್

By

Published : May 2, 2020, 8:31 PM IST

ನವದೆಹಲಿ:ಕೋವಿಡ್ -19 ಬಿಕ್ಕಟ್ಟಿನ ಮಧ್ಯೆ ಹಣಕಾಸು ವ್ಯವಸ್ಥೆಯಲ್ಲಿನ ಒತ್ತಡವನ್ನು ಕಡಿಮೆ ಮಾಡಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಶಕ್ತಿಕಾಂತ ದಾಸ್ ಶನಿವಾರ ಬ್ಯಾಂಕ್​​ಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿ, ಆರ್ಥಿಕ ಪರಿಸ್ಥಿತಿ ಮತ್ತು ಈಗಾಗಲೇ ಘೋಷಿಸಿದ ವಿವಿಧ ಕ್ರಮಗಳ ಅನುಷ್ಠಾನ ಪರಿಶೀಲಿಸಿದರು.

ವಿಡಿಯೋ ಕಾನ್ಫರೆನ್ಸ್ ಮೂಲಕ ಎರಡು ಪ್ರತ್ಯೇಕ ಸಭೆಯಲ್ಲಿ ಪ್ರಮುಖ ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್​ಗಳ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಇಒಗಳು ಭಾಗವಹಿಸಿದ್ದರು ಎಂದು ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಬ್ಯಾಂಕಿಂಗ್​ಯೇತರ ಹಣಕಾಸು ಕಂಪನಿಗಳು, ಕಿರುಬಂಡವಾಳ ಸಂಸ್ಥೆಗಳು, ವಸತಿ ಹಣಕಾಸು ಕಂಪನಿಗಳು, ಮ್ಯೂಚುವಲ್ ಫಂಡ್‌ ಸೇರಿದಂತ ದ್ರವ್ಯತಾ ಆರ್ಥಿಕತೆಯ ವಿವಿಧ ಕ್ಷೇತ್ರಗಳಿಗೆ ಸಾಲದ ಹರಿವಿನ ಕುರಿತು ಮಾಹಿತಿ ಪಡೆದರು. ವಿಶೇಷವಾಗಿ ಎಂಎಸ್‌ಎಂಇಗಳಿಗೆ ಲಾಕ್​ಡೌನ್​ ಬಳಿಕ ಸಾಲದ ಹರಿವಿನಲ್ಲಿ ಯಾವುದೇ ವ್ಯತ್ಯಾಸ ಆಗದಂತೆ ನೋಡಿಕೊಳ್ಳಬೇಕು ಎಂಬ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಆರ್‌ಬಿಐ ಘೋಷಿಸಿದ ಸಾಲದ ಕಂತುಗಳ ಮರುಪಾವತಿಯ ಮೂರು ತಿಂಗಳ ನಿಷೇಧದ ಅನುಷ್ಠಾನದ ಪ್ರಗತಿಯನ್ನು ಸಭೆಯಲ್ಲಿ ಪರಿಶೀಲಿಸಿದರು. ಕೆಲ ದಿನಗಳ ಹಿಂದೆ ಸಾಲದ ವಿನಾಯಿತಿಯ ಬ್ಯಾಂಕ್​ಗಳ ಕಾರ್ಯಪ್ರವೃತ್ತಿ ಬಗ್ಗೆ ಪರಿಶೀಲಿಸುವಂತೆ ಸುಪ್ರೀಂಕೋರ್ಟ್​ ಆರ್​ಬಿಐಗೆ ತಾಕೀತು ಮಾಡಿತ್ತು.

ಜಾಗತಿಕ ಆರ್ಥಿಕತೆಯ ಮಂದಗತಿಯನ್ನು ಗಮನದಲ್ಲಿಟ್ಟುಕೊಂಡು ಬ್ಯಾಂಕ್​ಗಳ ಸಾಗರೋತ್ತರ ಶಾಖೆಗಳ ಮೇಲ್ವಿಚಾರಣೆ ಕುರಿತು ಚರ್ಚಿಸಲಾಗಿದೆ.

ಮ್ಯೂಚುವಲ್ ಫಂಡ್ ಸೇರಿದಂತೆ ಸಾಲಗಾರರು, ಸಾಲದಾತರು ಮತ್ತು ಇತರ ಸಂಸ್ಥೆಗಳು ಎದುರಿಸುತ್ತಿರುವ ಒತ್ತಡ ಕಡಿಮೆ ಮಾಡಲು ರಿಸರ್ವ್ ಬ್ಯಾಂಕ್ ಹಲವು ಕ್ರಮಗಳನ್ನು ಘೋಷಿಸಿದೆ. ಪರಿಸ್ಥಿತಿಯನ್ನು ಎದುರಿಸಲು ಹೆಚ್ಚಿನ ಉಪಕ್ರಮಗಳನ್ನು ತೆಗೆದುಕೊಳ್ಳುವ ಭರವಸೆ ಸಹ ನೀಡಿದೆ.

ABOUT THE AUTHOR

...view details