ನವದೆಹಲಿ:ದೇಶದಲ್ಲಿ ಕಾಣುತ್ತಿರುವ ಆರ್ಥಿಕ ಚೇತರಿಕೆ ಅತಿ ಶೀಘ್ರದಲ್ಲೇ ಕೋವಿಡ್‌ಗೂ ಮುಂಚೆ ಇದ್ದಂತಹ ಸ್ಥಿತಿಗೆ ಕೊಂಡೊಯ್ಯುತ್ತದೆ ಎಂದು ಖ್ಯಾತ ಅರ್ಥಶಾಸ್ತ್ರಜ್ಞ ಜಯಂತ್ ಆರ್ ವರ್ಮಾ ಅಭಿಪ್ರಾಯ ಪಟ್ಟಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಭಾರತೀಯ ಹಣಕಾಸು ಕ್ಷೇತ್ರದಲ್ಲಿನ ಆರೋಗ್ಯಕರ ಬೆಳವಣಿಗೆಯೂ ಆರ್ಥಿಕ ಬೆಳವಣಿಗೆಗೆ ಧನಾತ್ಮಕ ಅಂಶವಾಗಿದೆ ಎಂದು ಹೇಳಿದ್ದಾರೆ.
ರಿಸರ್ವ್ ಬ್ಯಾಂಕಿನ ವಿತ್ತೀಯ ನೀತಿ ಸಮಿತಿಯ (ಎಂಪಿಸಿ) ಸದಸ್ಯರೂ ಆಗಿರುವ ವರ್ಮಾ, ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ, ಅಧಿಕ ಮತ್ತು ನಿರಂತರ ಹಣದುಬ್ಬರವು ವಿತ್ತೀಯ ನೀತಿಯ ಮೇಲೆ ಪ್ರಮುಖ ಅಡಚಣೆಯಾಗಿದೆ ಎಂದಿದ್ದಾರೆ.
ಈಗಿನ ಆರ್ಥಿಕ ಚೇತರಿಕೆಯ ಬಗ್ಗೆ ನಾನು ಸಾಕಷ್ಟು ಧನಾತ್ಮಕವಾಗಿದ್ದೇನೆ. ಕೆಲ ಸಾಲ ನೀಡಿಕೆಯ ಸೇವೆಗಳನ್ನು ಹೊರತುಪಡಿಸಿ ಆರ್ಥಿಕತೆಯ ಹೆಚ್ಚಿನ ಕ್ಷೇತ್ರಗಳಲ್ಲಿ ಕೋವಿಡ್‌ಗೂ ಮುಂಚಿನ ಮಟ್ಟಕ್ಕಿಂತ ಬೇಗನೆ ಕರೆದೊಯ್ಯುತ್ತದೆ. 2018 ರ ಸುಮಾರಿಗೆ ಆರಂಭವಾದ ನಿಧಾನಗತಿಯನ್ನು ಹಿಮ್ಮೆಟ್ಟಿಸುವುದು ಮತ್ತು ಸುಸ್ಥಿರ ಬೆಳವಣಿಗೆಯನ್ನು ಸಾಧಿಸುವುದು ಸವಾಲಾಗಿದೆ ಎಂದು ವರ್ಮಾ ಹೇಳಿದ್ದಾರೆ.