ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ಸೇರಿಸುವ ಕುರಿತು ಕೇಂದ್ರ ಸರ್ಕಾರವು ಈವರೆಗೆ ಯಾವುದೇ ರಾಜ್ಯದಿಂದ ಒಂದು ಪ್ರಾತಿನಿಧ್ಯ ಸ್ವೀಕರಿಸಿಲ್ಲ ಎಂದು ಹಣಕಾಸು ಖಾತೆಯ ರಾಜ್ಯ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ಲೋಕಸಭೆಯಲ್ಲಿ ಸೋಮವಾರ ಪ್ರಶ್ನೋತ್ತರ ವೇಳೆ ಜೆಡಿಯು ಸಂಸದ ರಾಜೀವ್ ರಂಜನ್ ಸಿಂಗ್ ಅವರ ಪ್ರಶ್ನೆಗೆ ಉತ್ತರಿಸಿದ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವರು, ಜಿಎಸ್‌ಟಿ ಕೌನ್ಸಿಲ್ ಸಭೆಯ ಕಾರ್ಯಸೂಚಿಯನ್ನು ವಿವಿಧ ರಾಜ್ಯಗಳು ನೀಡಿದ ಸಲಹೆಗಳ ಆಧಾರದ ಮೇಲೆ ಸಿದ್ಧಪಡಿಸಲಾಗುತ್ತದೆ. ಈ ವಿಷಯವನ್ನು (ಜಿಎಸ್‌ಟಿಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಸೇರ್ಪಡೆ) ಕಾರ್ಯಸೂಚಿಯಲ್ಲಿ ಸೇರಿಸಲು ಒಂದೇ ಒಂದು ರಾಜ್ಯವು ನಮಗೆ ಸೂಚಿಸಿಲ್ಲ ಎಂದರು.
ಜಿಎಸ್‌ಟಿ ಮಂಡಳಿಯ ಮುಂದಿನ ಸಭೆಯಲ್ಲಿ ಕೇಂದ್ರ ಮತ್ತು ರಾಜ್ಯಗಳು ಭಾಗವಹಿಸುವಾಗ ಈ ವಿಷಯವನ್ನು ತೆಗೆದುಕೊಳ್ಳಲು ಕೇಂದ್ರವು ಮುಕ್ತವಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಪೆಟ್ರೋಲಿಯಂ ಉತ್ಪನ್ನಗಳಾದ ಪೆಟ್ರೋಲಿಯಂ ಮತ್ತು ಡೀಸೆಲ್ ಅನ್ನು ಜಿಎಸ್‌ಟಿ ಚೌಕಟ್ಟಿನಡಿಯಲ್ಲಿ ಸೇರಿಸುವುದು ಬಹಳ ಸಮಯದಿಂದ ಬಾಕಿ ಉಳಿದಿದೆ. ವಾಹನ ಇಂಧನಗಳ ಬೆಲೆ ಏರಿಕೆಯಿಂದಾಗಿ ಇದು ಇತ್ತೀಚೆಗೆ ಜನರ ಗಮನ ಸೆಳೆಯುತ್ತಿದೆ.