ಬೆಂಗಳೂರು: ಕರ್ನಾಟಕದಲ್ಲಿ ಗಣಿ ಕಾರ್ಮಿಕರ ಬದುಕು ದುಸ್ಥರವಾಗಿದ್ದು, ಅವರ ಜೀವನೋಪಾಯಕ್ಕೆ ದಾರಿಮಾಡಿ ಕೊಡುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿ 'ಕರ್ನಾಟಕ ಗಣಿ ಅವಲಂಬಿತ ವೇದಿಕೆ'ಯ (ಕೆಜಿಎವಿ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ರಾಜ್ಯದಲ್ಲಿ ಗಣಿಗಾರಿಕೆ ನಿಷೇಧ ತೆರವುಗೊಳಿಸಿ ಮರು ಆರಂಭ ಮಾಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದ್ದರೂ ರಾಜ್ಯ ಸರ್ಕಾರ ಈ ಬಗ್ಗೆ ಆಸಕ್ತಿ ತಳೆಯುತ್ತಿಲ್ಲ. ಗಣಿ ಉದ್ಯಮ ನಂಬಿದ್ದ ಲಕ್ಷಾಂತರ ಕಾರ್ಮಿಕರು ಕೆಲಸವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಕೆಜಿಎವಿ ಮುಖಂಡ ಎಸ್ ರಾಜಕುಮಾರ್ ಹೇಳಿದರು.
ಬಳ್ಳಾರಿ, ಕೊಪ್ಪಳ, ಚಿತ್ರದುರ್ಗ ಜಿಲ್ಲೆಗಳ ಸುಮಾರು 6 ಸಾವಿರ ಗಣಿ ಕಾರ್ಮಿಕರು ನಿರುದ್ಯೋಗಿಗಳಾಗಿದ್ದಾರೆ. ಇದರ ಜೊತೆಗೆ ಗಣಿ ಅವಲಂಬಿತ ಸಣ್ಣ ಪ್ರಮಾಣ ಕೈಗಾರಿಕೆಗಳು, ಲಾರಿ ಚಾಲಕರು ಸೇರಿದಂತೆ ಪರೋಕ್ಷವಾಗಿ ಲಕ್ಷಾಂತರ ಜನರ ಉದ್ಯೋಗ ಕಡಿತವಾಗಿದೆ. ಸರ್ಕಾರ ಇವರಿಗೆ ಗಣಿಗಾರಿಕೆ ಪುನರ್ ಆರಂಭ ಇಲ್ಲವೇ ಬದಲಿ ಉದ್ಯೋಗ ವ್ಯವಸ್ಥೆ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ನಿಶ್ಚಿತ ಆದಾಯವಿಲ್ಲದೆ ಗಣಿ ಉದ್ಯೋಗಸ್ಥರು ಸಂಕಷ್ಟದಲ್ಲಿದ್ದಾರೆ. ಗಣಿ ಉದ್ಯಮ ನಡೆಯುತ್ತಿರುವ ಬಹುತೇಕ ಪ್ರದೇಶ ಬರಗಾಲಕ್ಕೆ ತುತ್ತಾಗಿದೆ. ಖರೀದಿದಾರರು ಹೊರರಾಜ್ಯಗಳಿಂದ ಮುಕ್ತವಾಗಿ ಕಬ್ಬಿಣದ ಅದಿರು ಕರಗಿಸುತ್ತಿದ್ದು, ಸ್ಥಳೀಯ ಅದಿರು ಮಾರಾಟಗಾರರ ಸಂಕಷ್ಟಕ್ಕೆ ಕಾರಣವಾಗಿದೆ. ಈ ನೀತಿಯಿಂದಲೇ ರಾಜ್ಯದಲ್ಲಿ ಮಾರಾಟವಾಗದೆ ಅಪಾರ ಪ್ರಮಾಣದ ಅದಿರು ಉಳಿದಿದೆ ಎಂದು ಆಪಾದಿಸಿದರು.
ಈ ವಿಷಯವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡು ಕಬ್ಬಿಣದ ಅದಿರು ಮುಕ್ತ ಮಾರಾಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ರಾಜ್ಯ ಗಣಿ ಉದ್ಯಮದಲ್ಲಿರುವ ತಾರತಮ್ಯ ನೀತಿಗಳನ್ನು ಸರಿಪಡಿಸಿ, ಗಣಿಗಾರಿಕೆ ಪುನರಾರಂಭಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.