ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ ಮಂಡಿಸಿರುವ 2020-21ನೇ ಬಜೆಟ್ನಲ್ಲಿ ಕರಾವಳಿಯ ಮೀನಿಗಾರಿಕೆ ಅಭಿವೃದ್ದಿಗೆ ಪ್ರಾಮುಖ್ಯತೆ ನೀಡಿದ್ದು, ವಿವಿಧ ಯೋಜನೆಗಳನ್ನು ಘೋಷಿಸಿದ್ದಾರೆ.
ಕರ್ನಾಟಕ ಮತ್ಸ್ಯ ವಿಕಾಸ ಯೋಜನೆ: ಮೀನುಗಾರರು ಆಧುನಿಕ ಮೀನುಗಾರಿಕೆ ತಾಂತ್ರಿಕತೆಗಳನ್ನು ಅಳವಡಿಸಿಕೊಳ್ಳುವಂತೆ ಪ್ರೋತ್ಸಾಹಿಸಲು “ಕರ್ನಾಟಕ ಮತ್ಸ್ಯ ವಿಕಾಸ ಯೋಜನೆ” ಘೋಷಿಸಲಾಗಿದೆ. ಇದಕ್ಕಾಗಿ1.5 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.
ಮಹಿಳಾ ಮೀನುಗಾರ ಸಬಲೀಕರಣ ಯೋಜನೆ:ಮೀನುಗಾರ ಮಹಿಳೆಯರು ಮೀನು ಇಳಿದಾಣದಿಂದ ಮಾರುಕಟ್ಟೆಗೆ ತ್ವರಿತವಾಗಿ ಮೀನು ಸಾಗಿಸಲು ಅನುಕೂಲವಾಗುವಂತೆ 1000 ಮೀನುಗಾರ ಮಹಿಳೆಯರಿಗೆ “ಮಹಿಳಾ ಮೀನುಗಾರ ಸಬಲೀಕರಣ” ಯೋಜನೆಯ ಮೂಲಕ ದ್ವಿಚಕ್ರ ವಾಹನಗಳನ್ನು ನೀಡುವುದಾಗಿ ಘೋಷಿಸಲಾಗಿದೆ. 5 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ.
ಮೀನು ಮರಿ ಉತ್ಪಾದನಾ ಕೇಂದ್ರ: ಹಿನ್ನೀರು ಮೀನುಗಾರಿಕೆಯನ್ನು ಸದೃಢಗೊಳಿಸಲು ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯಲ್ಲಿ ಹಿನ್ನೀರು ಮೀನು ಮರಿ ಉತ್ಪಾದನಾ ಕೇಂದ್ರ ಸ್ಥಾಪನೆ. ಇದಕ್ಕಾಗಿ 25 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಅನುಷ್ಠಾನ.
ಮೀನು ರಫ್ತು ಸ್ಥಾವರ:ಮಂಗಳೂರು ತಾಲೂಕು ಕುಳಾಯಿಯಲ್ಲಿ ಹೊಸ ಮೀನುಗಾರಿಕೆ ಬಂದರು ನಿರ್ಮಿಸಲಾಗುತ್ತಿದೆ. ಈ ಪ್ರದೇಶದ ರಫ್ತು ವಹಿವಾಟು ಹೆಚ್ಚಿಸಲು ಆಧುನಿಕ ಕರಾವಳಿ ಮೀನು ರಫ್ತು ಸ್ಥಾವರವನ್ನು ಕೇಂದ್ರ ಸರ್ಕಾರದ ಸಾಗರಮಾಲಾ ಯೋಜನೆಯಡಿ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ 12.50 ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾಪನೆ. ಮೀನುಗಾರಿಕೆ ಬಂದರು ಮತ್ತು ಮೀನುಗಾರಿಕೆ ಇಳಿದಾಣಗಳು ಸಶಕ್ತ ಮೀನುಗಾರಿಕೆಗೆ ಪೂರಕ ಸೌಕರ್ಯಗಳು. ಉಡುಪಿ ಜಿಲ್ಲೆ ಹೆಜಮಾಡಿ ಕೋಡಿಯಲ್ಲಿ 181 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಮೀನುಗಾರಿಕೆ ಬಂದರು ನಿರ್ಮಾಣ.
ಬಂದರುಗಳ ಅಭಿವೃದ್ದಿ: ಉಡುಪಿ ಜಿಲ್ಲೆ ಹಂಗಾರಕಟ್ಟೆ ಬಂದರು ಅಭಿವೃದ್ದಿಗೆ 130 ಕೋಟಿ ರೂ. ಉತ್ತರ ಕನ್ನಡ ಜಿಲ್ಲೆ ಕಾರವಾರ ಮೀನುಗಾರಿಕಾ ಬಂದರು ಅಭಿವೃದ್ದಿ ಹಾಗೂ ಮೂಲಭೂತ ಸೌಕರ್ಯಕ್ಕಾಗಿ 4 ಕೋಟಿ ರೂ. ಮೀಸಲು. ಉತ್ತರ ಕನ್ನಡ ಜಿಲ್ಲೆ ತೆಂಗಿನಗುಂಡಿ ಬಂದರಿನ ಅಳಿವೆ ಹೂಳೆತ್ತುವ ಕಾಮಗಾರಿಗೆ (100 ಮೀ) 5 ಕೋಟಿ ರೂ. ಉಡುಪಿ ಜಿಲ್ಲೆ ಬೈಂದೂರು ತಾಲೂಕು ಮರವಂತೆಯಲ್ಲಿ ನಿರ್ಮಿಸುತ್ತಿರುವ ಹೊರ ಬಂದರಿನ 2ನೇ ಹಂತದ ಕಾಮಗಾರಿಗಳನ್ನು 85 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಂಡು ಮೀನುಗಾರರ ಉಪಯೋಗಕ್ಕೆ ಲಭ್ಯವಾಗುವಂತೆ ಕ್ರಮ. ಉಡುಪಿ ಜಿಲ್ಲೆ ಕೊಡೇರಿ ಮೀನುಗಾರಿಕೆ ಬಂದರಿನಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ 2 ಕೋಟಿ ರೂ. ಘೋಷನೆ.