ನವದಹೆಲಿ: ದೇಶದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಮಂಗಳವಾರ ಅಬುಧಾಬಿ ಕೆಮಿಕಲ್ಸ್ ಡೆರಿವೇಟಿವ್ಸ್ ಕಂಪನಿಯ ಆರ್‌ಎಸ್‌ಸಿ ಲಿಮಿಟೆಡ್ (ತಾಜಿಜ್) ನೊಂದಿಗೆ 200 ಕೋಟಿ ಡಾಲರ್ (ಅಂದಾಜು 15,000 ಕೋಟಿ ರೂ.) ಹೂಡಿಕೆಯೊಂದಿಗೆ ಜಂಟಿ ಉದ್ಯಮ ಆರಂಭಿಸುವುದಾಗಿ ಘೋಷಿಸಿದೆ.
ಪಶ್ಚಿಮ ಅಬುಧಾಬಿಯಲ್ಲಿ ಈ ಎರಡು ಕಂಪನಿಗಳು ಜಂಟಿಯಾಗಿ ಪೆಟ್ರೋಕೆಮಿಕಲ್ ಉತ್ಪಾದನಾ ಘಟಕವನ್ನು ಸ್ಥಾಪಿಸಲಿವೆ. ಅಬುಧಾಬಿ ಸರ್ಕಾರಿ ವಲಯದ ತೈಲ ದೈತ್ಯ ಸಂಸ್ಥೆ ಅಬುಧಾಬಿ ನ್ಯಾಷನಲ್ ಆಯಿಲ್ ಕಂಪನಿ ಇತ್ತೀಚೆಗೆ ಎಡಿಕ್ಯೂ ಜೊತೆಗೆ ಸ್ಥಾಪಿಸಿರುವ ಸಂಸ್ಥೆಯೇ ಈ ತಾಜಿಜ್. ಪಶ್ಚಿಮ ಅಬುಧಾಬಿಯಲ್ಲಿ ರುವೈಸ್ ಸ್ಥಾವರವನ್ನು ಅಭಿವೃದ್ಧಿಪಡಿಸಲು ಇದು ನೆರವಾಗಲಿದೆ ಎಂದು ಅಲ್ಲಿನ ಸರ್ಕಾರ ಹೇಳಿತ್ತು.
ತಾಜಿಜ್ ಮತ್ತು ಆರ್‌ಐಎಲ್ ರುವೈಸ್‌ನಲ್ಲಿರುವ ತಾಜಿಜ್ ಇಂಡಸ್ಟ್ರಿಯಲ್ ಕೆಮಿಕಲ್ಸ್ ವಲಯದಲ್ಲಿ ತಾಜಿಜ್ ಇಡಿಸಿ ಮತ್ತು ಪಿವಿಸಿ ಉತ್ಪಾದನಾ ಘಟಕವನ್ನು ವಿಶ್ವದರ್ಜೆಯ ರಾಸಾಯನಿಕಗಳ ಉತ್ಪಾದನೆಗಾಗಿ ಸ್ಥಾಪಿಸಲು ಒಪ್ಪಂದ ಮಾಡಿಕೊಂಡಿವೆ.
ಈ ಕಂಪನಿಯು ವಾರ್ಷಿಕ 9.40 ಲಕ್ಷ ಟನ್ ಕ್ಲೋರ್ ಅಲ್ಕಲಿ, 11 ಲಕ್ಷ ಟನ್ ಎಥಿಲೀನ್ ಡೈಕ್ಲೋರೈಡ್ (EDC) ಹಾಗೂ 3.60 ಲಕ್ಷ ಟನ್ ಪಾಲಿವಿನೈಲ್ ಕ್ಲೋರೈಡ್ (PVC) ಉತ್ಪಾದನಾ ಸಾಮರ್ಥ್ಯದೊಂದಿಗೆ ಸ್ಥಾವರ ಸ್ಥಾಪಿಸುತ್ತದೆ. ಇದಕ್ಕಾಗಿ 200 ಕೋಟಿ ಡಾಲರ್‌ಗಿಂತ ಹೆಚ್ಚು ವೆಚ್ಚವಾಗಲಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ ಕೈಗಾರಿಕೆಗಳ ಸಚಿವ ಸುಲ್ತಾನ್ ಅಹ್ಮದ್ ಜಾಬರ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಸಿಎಂಡಿ ಮುಖೇಶ್ ಅಂಬಾನಿ ಸಮ್ಮುಖದಲ್ಲಿ ತಾಜಿಜ್ ಸಿಇಒ, ಆರ್‌ಐಎಲ್ ಸ್ಟ್ರಾಟಜಿ ಮತ್ತು ಬಿಸಿನೆಸ್ ಡೆವಲಪ್‌ಮೆಂಟ್ ಮುಖ್ಯಸ್ಥ ಖಲೀಫಾ ಮೆಹಿರಿ ಅವರು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ತಾಜಿಜ್ ಇಂಡಸ್ಟ್ರಿಯಲ್ ಕೆಮಿಕಲ್ ಝೋನ್ ಯೋಜನೆಗಳು ಪ್ರಸ್ತುತ ವಿನ್ಯಾಸ ಹಂತದಲ್ಲಿದ್ದು, 2025ರ ವೇಳೆಗೆ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ.
ಇದನ್ನೂ ಓದಿ:ಭಾರತೀಯ ಮಾರುಕಟ್ಟೆಗೆ ಫೋಕ್ಸ್‌ವ್ಯಾಗನ್ ಯುವಿ ಬಿಡುಗಡೆ ; ಹೊಸ ಕಾರಿನ ಬೆಲೆ ಇಷ್ಟು..