ನವದೆಹಲಿ: ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮ (ತಿದ್ದುಪಡಿ) ಮಸೂದೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಈ ಮಸೂದೆಯ ಪ್ರಕಾರ, ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಒಂದು ಬ್ಯಾಂಕಿನ ಮೇಲೆ ವಿಷೇಧ ಹೇರಿದರೂ ಸಹ ಠೇವಣಿದಾರರು 90 ದಿನಗಳೊಳಗೆ 5 ಲಕ್ಷ ರೂ.ಗಿಂತ ಕಡಿಮೆ ಮೊತ್ತವನ್ನು ಮರಳಿ ಪಡೆಯುತ್ತಾರೆ.
ಕ್ಯಾಬಿನೆಟ್ ಸಭೆಯ ನಂತರ ಮಾತನಾಡಿದ ಸೀತಾರಾಮನ್, ಮಸೂದೆ ಠೇವಣಿ ವಿಮಾ ರಕ್ಷಣೆಯನ್ನು ಹೆಚ್ಚಿಸುತ್ತದೆ ಮತ್ತು ಬ್ಯಾಂಕ್ ಆರ್ಥಿಕ ಒತ್ತಡಕ್ಕೆ ಸಿಲುಕಿದರೆ ಠೇವಣಿದಾರರಿಗೆ ಮೊತ್ತವನ್ನು ವಸೂಲಿ ಮಾಡಲು ತೆಗೆದುಕೊಳ್ಳುವ ಸಮಯವನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದರು.
ಈ ನಿರ್ಧಾರವು ಈಗಾಗಲೇ ನಿಷೇಧಕ್ಕೊಳಗಾದ ಬ್ಯಾಂಕುಗಳ ಠೇವಣಿದಾರರಿಗೆ ಪರಿಹಾರವನ್ನು ನೀಡುತ್ತದೆ. ಎಲ್ಲಾ ಠೇವಣಿದಾರರ ಸುಮಾರು 98.3ರಷ್ಟು ಹಣವನ್ನು ಒಳಗೊಂಡಿರುತ್ತದೆ. ಈ ಅಧಿವೇಶನದಲ್ಲಿಯೇ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗುವುದು ಎಂದು ಸೀತಾರಾಮನ್ ಹೇಳಿದ್ದಾರೆ.
ಇದನ್ನೂ ಓದಿ: ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಹೆಚ್ಚಿನ ನೋಟು ಮುದ್ರಣ ಮಾಡಲ್ಲ: ಸೀತಾರಾಮನ್
ಸಚಿವ ಸಂಪುಟ ಅನುಮೋದಿಸಿದ ಮಸೂದೆಯ ಪ್ರಕಾರ, ಪ್ರತಿ ಠೇವಣಿದಾರರ ಬ್ಯಾಂಕ್ ಠೇವಣಿಯನ್ನು ಪ್ರತಿ ಬ್ಯಾಂಕಿನಲ್ಲಿ 5 ಲಕ್ಷ ರೂ.ವರೆಗೆ ಮೂಲ ಮತ್ತು ಬಡ್ಡಿ ಎರಡಕ್ಕೂ ವಿಮೆ ಮಾಡಲಾಗುತ್ತದೆ. ಎಲ್ಲಾ ಠೇವಣಿ ಖಾತೆಗಳಲ್ಲಿ 98.3 ಪ್ರತಿಶತ ಮತ್ತು ಶೇ .50.9 ರಷ್ಟು ಠೇವಣಿ ಮೌಲ್ಯಕ್ಕೆ ವಿಮೆ ಮೊತ್ತವನ್ನು 1 ಲಕ್ಷದಿಂದ 5 ಲಕ್ಷ ರೂ.ಗೆ ಹೆಚ್ಚಿಸಲಾಗುತ್ತದೆ ಎಂದು ವಿವರಿಸಿದ್ದಾರೆ. ಇದು ಜಾಗತಿಕ ಸರಾಸರಿಗಿಂತ ಹೆಚ್ಚಾಗಿದೆ. ಜಾಗತಿಕವಾಗಿ ಎಲ್ಲಾ ಠೇವಣಿ ಖಾತೆಗಳಲ್ಲಿ ಕೇವಲ 80 ಪ್ರತಿಶತದಷ್ಟು ಮಾತ್ರ ಇದೇ ರೀತಿಯ ಠೇವಣಿ ವಿಮಾ ಯೋಜನೆಗಳ ವ್ಯಾಪ್ತಿಗೆ ಬರುತ್ತವೆ, ಆದರೆ ಠೇವಣಿ ಮೌಲ್ಯದ ಕೇವಲ 20-30 ರಷ್ಟು ಮಾತ್ರ ಒಳಗೊಳ್ಳುತ್ತದೆ.