ಮ್ಯಾಂಚೆಸ್ಟರ್: ವಿಶ್ವಕಪ್ನಲ್ಲೇ ಬಹುನಿರೀಕ್ಷಿತ ಪಂದ್ಯವಾದ ಇಂಡೋ-ಪಾಕ್ ಕದನಕ್ಕೆ ಕ್ಷಣಗಣನೆ ಶುರುವಾಗಿದೆ. ಎರಡು ತಂಡಗಳಲ್ಲಿ ವಿಶ್ವಶ್ರೇಷ್ಟ ಆಟಗಾರರಿದ್ದು, ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಬಹುದಾದ ಟಾಪ್ 5 ಆಟಗಾರರ ವಿವರ ಇಲ್ಲಿದೆ.
ರೋಹಿತ್ v/s ಇಮಾಮ್ ಉಲ್ ಹಕ್
ಭಾರತ ತಂಡದ ಆರಂಭಿಕ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ನಲ್ಲಿ 3 ದ್ವಿಶತಕ ಸಿಡಿಸಿದ ಏಕೈಕ ಆಟಗಾರನಾಗಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ 23 ಶತಕ ಸಿಡಿಸಿರುವ ರೋಹಿತ್, ಭಾರತ ತಂಡದ ಓಪನರ್ ಆದ್ಮೇಲೆ ಹಲವಾರು ದಾಖಲೆಗಳನ್ನು ಪುಡಿಗಟ್ಟಿದ್ದಾರೆ. 208 ಏಕದಿನ ಪಂದ್ಯವಾಡಿರುವ ರೋಹಿತ್ 8,189 ರನ್ ಗಳಿಸಿದ್ದಾರೆ.
ಪಾಕಿಸ್ತಾನ ತಂಡದ ಪರ 31 ಏಕದಿನ ಪಂದ್ಯವನ್ನಷ್ಟೇ ಆಡಿರುವ ಇಮಾಮ್, ಈಗಾಗಲೇ ಶೇ 57 ರ ಸರಾಸರಿಯಲ್ಲಿ 6 ಶತಕ ಹಾಗೂ 6 ಅರ್ಧಶತಕ ಸೇರಿದಂತೆ 1,486 ರನ್ ಗಳಿಸಿ ಗಮನ ಸೆಳೆದಿದ್ದಾರೆ.
ಕೊಹ್ಲಿ v/s ಬಾಬರ್ ಅಜಂ
ರನ್ ಮಷಿನ್ ಎಂದೇ ಖ್ಯಾತರಾಗಿರುವ ಏಕದಿನ ಕ್ರಿಕೆಟ್ನ ನಂಬರ್ ಒನ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಪ್ರತಿಯೊಂದು ಪಂದ್ಯದಲ್ಲೂ ಯಾವುದಾದರೊಂದು ದಾಖಲೆ ನಿರ್ಮಿಸುತ್ತಿದ್ದಾರೆ. ಕೊಹ್ಲಿ 229 ಏಕದಿನ ಪಂದ್ಯಗಳಲ್ಲಿ 10,943 ರನ್ ಗಳಿಸಿದ್ದು, 41 ಶತಕ ಹಾಗೂ 50 ಅರ್ಧಶತಕ ಸಿಡಿಸಿದ್ದಾರೆ.
'ಪಾಕಿಸ್ತಾನದ ವಿರಾಟ್ ಕೊಹ್ಲಿ' ಎಂದೇ ಕರೆಸಿಕೊಳ್ಳುತ್ತಿರುವ 25 ವರ್ಷದ ಬಾಬರ್ ಅಜಂ ಕೇವಲ 67 ಪಂದ್ಯಗಳಲ್ಲೇ 2,854 ರನ್ಗಳಿಸಿದ್ದಾರೆ. ಇದರಲ್ಲಿ 9 ಶತಕ ಹಾಗೂ 13 ಅರ್ಧಶತಕ ಇದೆ.
ಬುಮ್ರಾ v/s ಅಮೀರ್
ಕಡಿಮೆ ಸಮಯದಲ್ಲಿ ಏಕದಿನ ಕ್ರಿಕೆಟ್ನಲ್ಲಿ ನಂಬರ್ ಒನ್ ಸ್ಥಾನಕ್ಕೇರಿರುವ ಭಾರತ ತಂಡದ ಯಾರ್ಕರ್ ಕಿಂಗ್ ಜಸ್ಪ್ರೀತ್ ಬುಮ್ರಾ ಈ ಪಂದ್ಯದ ಪ್ರಮುಖ ಆಕರ್ಷಣೆಯಾಗಿದ್ದಾರೆ. ಬುಮ್ರಾ 51 ಪಂದ್ಯಗಳಲ್ಲಿ 90 ವಿಕೆಟ್ ಪಡೆದಿದ್ದಾರೆ. 27 ಕ್ಕೆ 5 ವಿಕೆಟ್ ಪಡೆದಿರುವುದು ಉತ್ತಮ ಬೌಲಿಂಗ್ ಪ್ರದರ್ಶನವಾಗಿದೆ.
ಪಾಕಿಸ್ತಾನದ ಬೌಲಿಂಗ್ ನೇತೃತ್ವ ವಹಿಸಿರುವ ಮೊಹಮ್ಮದ್ ಅಮಿರ್ 54 ಏಕದಿನ ಪಂದ್ಯಗಳನ್ನಾಡಿದ್ದು, 70 ವಿಕೆಟ್ ಪಡೆದಿದ್ದಾರೆ. 30 ರನ್ ನೀಡಿ 5 ವಿಕೆಟ್ ಪಡೆದಿರುವುದು ಇವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ.
ಭುವನೇಶ್ವರ್ ಕುಮಾರ್ v/s ವಹಾಬ್ ರಿಯಾಜ್
ವಿಶ್ವದ ಸ್ವಿಂಗ್ ಸ್ಪೆಶಲಿಸ್ಟ್ ಎಂದೇ ಹೆಸರಾಗಿರುವ ಭುವನೇಶ್ವರ್ ಕುಮಾರ್ ಭಾರತದ ಬೌಲಿಂಗ್ ಶಕ್ತಿಯಾಗಿದ್ದಾರೆ. ಭುವಿ 107 ಪಂದ್ಯಗಳಲ್ಲಿ 123 ವಿಕೆಟ್ ಪಡೆದಿದ್ದಾರೆ. 42 ರನ್ ನೀಡಿ 5 ವಿಕೆಟ್ ಪಡೆದಿರುವುದು ಅವರ ಉತ್ತಮ ಪ್ರದರ್ಶನವಾಗಿದೆ.
33 ವರ್ಷದ ವಹಾಬ್ ರಿಯಾಜ್ ಪಾಕಿಸ್ತಾನ ಪರ 82 ಏಕದಿನ ಪಂದ್ಯವಾಡಿದ್ದು, 106 ವಿಕೆಟ್ ಪಡೆದಿದ್ದಾರೆ. 2011 ವಿಶ್ವಕಪ್ನಲ್ಲಿ ಭಾರತದ ವಿರುದ್ಧ 46 ರನ್ ನೀಡಿ 5 ವಿಕೆಟ್ ಪಡೆದಿದ್ದೇ ಇವರ ಜೀವನ ಶ್ರೇಷ್ಠ ಸಾಧನೆ.
ಭುವನೇಶ್ವರ್ v/s ವಹಾಬ್ ರಿಯಾಜ್ ಹಾರ್ದಿಕ್ ಪಾಂಡ್ಯ v/s ಮೊಹಮ್ಮದ್ ಹಫೀಜ್
ಸ್ಫೋಟಕ ಬ್ಯಾಟಿಂಗ್ ಹಾಗೂ ಮಧ್ಯಮ ವೇಗಿಯಾಗಿರುವ ಹಾರ್ದಿಕ್ ಪಾಂಡ್ಯ 47 ಏಕದಿನ ಪಂದ್ಯಗಳಲ್ಲಿ 794 ರನ್ ಸಿಡಿಸಿದ್ದಾರೆ. ಜೊತೆಗೆ 44 ವಿಕೆಟ್ ಪಡೆದು ಬೌಲಿಂಗ್ನಲ್ಲೂ ಕಮಾಲ್ ಮಾಡಿದ್ದಾರೆ. ಐಪಿಎಲ್ನಲ್ಲಿ 190 ಕ್ಕೂ ಹೆಚ್ಚಿನ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿರುವ ಪಾಂಡ್ಯ ಭಾರತದ ಪಾಲಿಗೆ ಟ್ರಂಪ್‌ಕಾರ್ಡ್ ಆಗಿದ್ದಾರೆ.
38 ವರ್ಷದ ಹಫೀಜ್ ಪಾಕಿಸ್ತಾನದ ಪರ 213 ಪಂದ್ಯಗಳನ್ನಾಡಿದ್ದು, 6,507 ರನ್ಗಳಿಸಿದ್ದಾರೆ. ಇದರಲ್ಲಿ 11 ಶತಕ ಕೂಡ ದಾಖಲಾಗಿವೆ. ಬೌಲಿಂಗ್ನಲ್ಲಿ 139 ವಿಕೆಟ್ ಪಡೆದು ತಂಡದ ಪ್ರಮುಖ ಆಲ್ರೌಂಡರ್ ಆಗಿದ್ದಾರೆ.
ಈ ಮೇಲಿನ ಎಲ್ಲಾ ಆಟಗಾರರು ಎರಡು ತಂಡಗಳಿಗೆ ಆಧಾರ ಸ್ಥಂಭವಾಗಿದ್ದಾರೆ. ಇವರ ಜೊತೆಗೆ ಭಾರತ ತಂಡಕ್ಕೆ ಧೋನಿ, ರಾಹುಲ್, ಚಹಾಲ್ ಕೂಡ ಗೇಮ್ ಚೇಂಜರ್ಗಳಾಗಿದ್ದರೆ, ಪಾಕಿಸ್ತಾನದ ಪರ ಫಾಖರ್ ಜಮಾನ್ ಮಲಿಕ್, ಶದಾಬ್ಖಾನ್, ಆಸಿಫ್ ಅಲಿಯಂತ ಆಟಗಾರರು ಗೇಮ್ ಚೇಂಜರ್ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.