ಹೈದರಾಬಾದ್:ಐಪಿಎಲ್ ಟೂರ್ನಿಯಲ್ಲಿ ಸೋಲು-ಗೆಲುವಿನ ಹೊರತಾಗಿ ಅತ್ಯಂತ ಹೆಚ್ಚಿನ ಅಭಿಮಾನಿ ಬಳಗವನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಆವೃತ್ತಿಯಲ್ಲೂ ಕಪ್ ಗೆಲ್ಲದೆ ನಿರಾಸೆ ಮೂಡಿಸಿದೆ.
ಆರಂಭದ ಆರು ಪಂದ್ಯಗಳನ್ನು ಸೋತಿದ್ದ ಆರ್ಸಿಬಿ ಕಪ್ ಆಸೆಯನ್ನು ಒಂದು ಹಂತಕ್ಕೆ ಬಿಟ್ಟಿತ್ತು. ಆದರೆ ನಂತರದಲ್ಲಿ ಕೆಲ ಪಂದ್ಯದಲ್ಲಿ ಗೆದ್ದು ಪ್ಲೇ ಆಫ್ಗೆ ಎಂಟ್ರಿ ಕೊಡುವ ಸೂಚನೆ ನೀಡಿತ್ತು.
ಈ ಬಾರಿಯಾದ್ರೂ ನಾವು ಕಪ್ ಗೆಲ್ಲುತ್ತೇವೆ ಎನ್ನುವ ಆರ್ಸಿಬಿ ಅಭಿಮಾನಿಗಳ ಅಚಲ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ವಿರಾಟ್ ಪಡೆ ಸೋತಿದ್ದು, ಟೂರ್ನಿಯಿಂದ ಹೊರಬಿದ್ದಿದೆ.
ಆರ್ಸಿಬಿ ಕಪ್ ಗೆಲ್ಲೋ ಸಾಧ್ಯತೆ ಇಲ್ಲವೇ ಇಲ್ಲ ಎಂದು ತಿಳಿದಿದ್ದರೂ ಕೊನೆಯ ಪಂದ್ಯದಲ್ಲಿ ಅಭಿಮಾನಿಗಳ ಸಂಖ್ಯೆಗೇನೂ ಕಮ್ಮಿ ಇರಲಿಲ್ಲ. ನಾವು ಯಾವತ್ತಿಗೂ ತಲೆ ಎತ್ತಿಯೇ ಇರುತ್ತೇವೆ. ಆರ್ಸಿಬಿ ಮೇಲಿನ ನಮ್ಮ ಪ್ರೀತಿ ಕಮ್ಮಿ ಆಗಲ್ಲ ಎನ್ನುವ ಬ್ಯಾನರ್ ಶನಿವಾರದ ಆರ್ಸಿಬಿ ಹಾಗೂ ಹೈದರಾಬಾದ್ ನಡುವಿನ ಪಂದ್ಯದಲ್ಲಿ ಎಲ್ಲರ ಗಮನ ಸೆಳೆದಿತ್ತು. ಜೊತೆಗೆ ಸೋಲು- ಗೆಲುವಿನ ಹೊರಾತಾದ ಅಭಿಮಾನಿಗಳ ಪ್ರೀತಿಯನ್ನು ಸಾರಿ ಹೇಳುತ್ತಿತ್ತು.
ಕನ್ನಡದಲ್ಲಿ ಧನ್ಯವಾದ ಹೇಳಿದ ವಿರಾಟ್ ಕೊಹ್ಲಿ:
ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ಅಭಿಮಾನಿ ಸಮೂಹಕ್ಕೆ ಕನ್ನಡದಲ್ಲೇ ಧನ್ಯವಾದ ಸಮರ್ಪಿಸಿದ್ದಾರೆ. ಕೆಲ ಫೋಟೋಗಳನ್ನು ಟ್ವಿಟರ್ನಲ್ಲಿ ಹಂಚಿಕೊಂಡಿರುವ ಕೊಹ್ಲಿ ನೀವು ಇಲ್ಲಾಂದ್ರೆ ನಾವು ಏನು ಅಲ್ಲ ಎಂದು ಕನ್ನಡದಲ್ಲಿ ಬರೆದುಕೊಂಡಿದ್ದಾರೆ.
ಅಭಿಮಾನಿಗಳಿಗೆ, ಮೈದಾನದ ಸಿಬ್ಬಂದಿ ಹಾಗೂ ಎಲ್ಲರಿಗೂ ಧನ್ಯವಾದ ತಿಳಿಸಿರುವ ಕೊಹ್ಲಿ, ಮುಂದಿನ ವರ್ಷ ಇನ್ನಷ್ಟು ಪರಿಣಾಮಕಾರಿಯಾಗಿ ಹಿಂತಿರುಗುತ್ತೇವೆ ಎನ್ನುವ ಭರವಸೆಯ ಮಾತುಗಳನ್ನು ಬರೆದಿದ್ದಾರೆ.