ಲಂಡನ್: ವಿಶ್ವಕಪ್ನ ತನ್ನ ಮೊದಲ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾದ ಎದುರು 21 ರನ್ಗಳ ಗೆಲುವು ಕಾಣುವ ಮೂಲಕ ಉತ್ತಮ ಆರಂಭ ಕಂಡ ಬಾಂಗ್ಲಾ ತಂಡದ ಪರ ಆಲ್ರೌಂಡರ್ ಶಕಿಭ್ ಅಲ್ ಹಸನ್ ಹಲವು ಮೈಲುಗಲ್ಲು ತಲುಪಿದ್ದಾರೆ.
ಬ್ಯಾಟಿಂಗ್ ನಲ್ಲಿ 75 ರನ್ಗಳಿಸಿದ ಶಕಿಬ್ ಬೌಲಿಂಗ್ನಲ್ಲೂ ಉತ್ತಮ ಪ್ರದರ್ಶನ ನೀಡಿ ಆಫ್ರಿಕಾದ ಆರಂಭಿಕ ಆಟಗಾರ ಮ್ಯಾರ್ಕ್ರಮ್ ವಿಕೆಟ್ ಪಡೆದು ತಂಡ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಶಕಿಬ್ ಈ ಪಂದ್ಯಲ್ಲಿ ತಮ್ಮ 250 ನೇ ಏಕದಿನ ಪಂದ್ಯದ ವಿಕೆಟ್ ಪಡೆದರು. ಈ ಮೂಲಕ ಏಕದಿನ ಕ್ರಿಕೆಟ್ನಲ್ಲಿ 5000 ರನ್ ಹಾಗೂ 250 ವಿಕೆಟ್ ಪಡೆದ ಬಾಂಗ್ಲಾದ ಪ್ರಥಮ, ಏಷ್ಯಾದ ತೃತೀಯ ಹಾಗೂ ವಿಶ್ವದ 5 ನೇ ಆಲ್ರೌಂಡರ್ ಎನಿಸಿಕೊಂಡರು.
ಇವರಿಗೂ ಮೊದಲು ಪಾಕಿಸ್ತಾನದ ಅಬ್ದುಲ್ ರಜಾಕ್ ಹಾಗೂ ಶಾಹಿದ್ ಆಫ್ರಿದಿ, ದ.ಆಫ್ರಿಕಾದ ಜಾಕ್ ಕಾಲೀಸ್, ಶ್ರೀಲಂಕಾದ ಜಯಸೂರ್ಯ ಈ ಸಾಧನೆ ಮಾಡಿದ್ದರು.
ಶಕಿಬ್ 199 ಏಕದಿನ ಪಂದ್ಯವಾಡಿದ್ದು 250 ವಿಕೆಟ್ ಹಾಗೂ 5793 ರನ್ಗಳಿಸಿದ್ದಾರೆ. ಇದರಲ್ಲಿ 7 ಶತಕ ಹಾಗೂ 43 ಅರ್ಧಶತಕ ಸೇರಿಕೊಂಡಿವೆ.
ಇನ್ನು ಇದೇ ಪಂದ್ಯದಲ್ಲಿ ಶಕಿಬ್ ಕೀಪರ್ ರಹೀಮ್ ಜೊತೆ ಸೇರಿ 142 ರನ್ಗಳ ಜೊತೆಯಾಟ ನೀಡಿದ್ದರು. ಇದು ಮೂರನೇ ವಿಕೆಟ್ ಜೊತೆಯಾಟದಲ್ಲಿ ಬಾಂಗ್ಲಾಪರ ದಾಖಲಾದ ಗರಿಷ್ಠ ಜೊತೆಯಾಟವಾಗಿದೆ.