ನವದೆಹಲಿ: ಸುಪ್ರೀಂನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಕೇಳಿ ಬಂದಿರುವ ಲೈಂಗಿಕ ಕಿರುಕುಳ ಆರೋಪಕ್ಕೆ ಇದೀಗ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ಗೊಗೊಯ್,ಈ ವಿಚಾರ ನಾಲ್ಕು ವೆಬ್ ಸೈಟ್ಗಳಲ್ಲಿ ಪ್ರಕಟವಾಗಿದ್ದು, ಅವುಗಳಿಂದ ಈ ಬಗ್ಗೆ ನನಗೆ ಮಾಹಿತಿ ತಿಳಿಯಿತು. ವಿಷಯ ತಿಳಿದು ನನಗೆ ತೀವ್ರ ಆಘಾತವುಂಟಾಯಿತು ಎಂದರು.
ಸಿಜೆಐ ಮೇಲೆ ಲೈಂಗಿಕ ಕಿರುಕುಳ ಆರೋಪ: ’ಇದೊಂದು ಪಿತೂರಿ’ ಎಂದ ಗೊಗೊಯ್! - ಸಂಚು
ಸುಪ್ರೀಂನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಸುಪ್ರೀಂಕೋರ್ಟ್ನಲ್ಲಿ ಅವರ ಕೈಕೆಳಗೆ ಕೆಲಸ ಮಾಡುವ ಮಾಜಿ ಸಹಾಯಕಿಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.
ಸಿಜೆಐ ರಂಜನ್ ಗೊಗೊಯ್ ವಿರುದ್ಧ ಅವರ ಮಾಜಿ ಕಿರಿಯ ಸಹಾಯಕಿಯೊಬ್ಬರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಇದನ್ನೇ ನಾಲ್ಕು ಮಾಧ್ಯಮ ಸಂಸ್ಥೆಗಳು ಪ್ರಸಾರ ಮಾಡಿದ್ದವು. ಈ ಬಗ್ಗೆ ಆ ಸಂಸ್ಥೆಗಳೊಂದಿಗೂ ಮಾತನಾಡಿದ್ದೇನೆ. ಈ ಮಧ್ಯೆ ಇದೊಂದು ದೊಡ್ಡ ಪಿತೂರಿಯಾಗಿದ್ದು, ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ ಎಂದು ತಿಳಿಸಿರುವ ಸಿಜೆಐ, ನನ್ನ ವಿರುದ್ಧ ಕೇಳಿ ಬಂದಿರುವ ಆರೋಪ ನ್ಯಾಯಾಂಗವನ್ನು ಅಸ್ಥಿರಗೊಳಿಸಲು ನಡೆದ ಬಹುದೊಡ್ಡ ಸಂಚು. ಆರೋಪ ಮಾಡಿದ ಮಹಿಳೆಯೊಂದಿಗೆ ಬಹುದೊಡ್ಡ ಕೈಗಳಿವೆ ಎನ್ನಿಸುತ್ತಿದೆ ಎಂದಿದ್ದಾರೆ.
ಜತೆಗೆ ಈ ಪ್ರಕರಣದ ವಿಚಾರಣೆ ಸುಪ್ರೀಂಕೋರ್ಟ್ನಲ್ಲಿ ನಡೆಯುತ್ತಿದ್ದು, ತೀರ್ಪು ಬಂದ ಬಳಿಕ ಸತ್ಯಾಸತ್ಯತೆ ತಿಳಿಯಲಿದೆ ಎಂದರು.