ಕಲಬುರಗಿ:ಜಿಲ್ಲೆಯಲ್ಲಿ ವಿಪರೀತ ಬಿಸಿಲು ಇರುವ ಹಿನ್ನೆಲೆಯಲ್ಲಿ ಮೇ 29ರಂದು ಪ್ರಾರಂಭವಾಗಬೇಕಿದ್ದ ಶಾಲೆಗಳಿಗೆ ಜೂನ್ 14ರವರೆಗೆ ರಜೆ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ.
ಪಾಲಕರೇ ಗಮನಿಸಿ... ಕಲಬುರಗಿಯಲ್ಲಿ ಜೂ. 14ರವರೆಗೆ ಶಾಲೆಗಳಿಗೆ ರಜೆ ವಿಸ್ತರಣೆ! - ಕಲಬುರಗಿ
ಜಿಲ್ಲೆಯಲ್ಲಿ ವಿಪರೀತವಾದ ಬಿಸಿಲು ಇರುವ ಹಿನ್ನೆಲೆಯಲ್ಲಿ ಮೇ 29ರಂದು ಪ್ರಾರಂಭವಾಗಬೇಕಿದ್ದ ಶಾಲೆಗಳಿಗೆ ಜೂನ್ 14ರವರೆಗೆ ರಜೆ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ.
ಜಿಲ್ಲೆಯಲ್ಲಿ ಬಿಸಿಲಿನ ತಾಪ 43-44 ಡಿಗ್ರಿ ಸೆಲ್ಸಿಯಸ್ ಮುಂದುವರೆದಿದೆ. ಸರಾಸರಿ 40 ಡಿಗ್ರಿ ಸೆಲ್ಸಿಯಸ್ಗೆ ಅಧಿಕವಾದ ಬಿಸಿಲಿನ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಶಾಲೆಗಳ ರಜೆ ವಿಸ್ತರಣೆ ಮಾಡಲಾಗಿದೆ.
ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಆರಂಭವನ್ನು ಮೇ 29ಕ್ಕೆ ಮಾಡಲು ರಾಜ್ಯ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿತ್ತು. ಆದರೆ ವಿಪರೀತವಾದ ಬಿಸಿಲಿನ ಹಿನ್ನೆಲೆ ಶಾಲೆಗಳ ರಜೆ ವಿಸ್ತರಣೆಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರು ಮನವಿ ಮಾಡಿದ್ದರು. ಮನವಿ ಪರಿಗಣಿಸಿದ ಪ್ರಾಥಮಿಕ ಶಿಕ್ಷಣ ನಿರ್ದೇಶಕರು ಜೂನ್ 14ರವರೆಗೆ ಸರ್ಕಾರಿ ಶಾಲೆಗಳ ರಜೆಯನ್ನು ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಸರ್ಕಾರಿ ಶಾಲೆಗಳು ಜೂ. 14ರಂದು ಪ್ರಾರಂಭವಾಗಲಿವೆ.
ಖಾಸಗಿ ಶಾಲೆಗಳು :
ಸರ್ಕಾರಿ ಶಾಲೆಗಳಿಗೆ ಜೂನ್ 14ರವರೆಗೆ ರಜೆ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ. ಇದೇ ಆದೇಶ ಖಾಸಗಿ ಶಾಲೆಗಳಿಗೂ ಅನ್ವಯವಾಗಲಿದೆ. ಆದರೆ ಶಾಲೆಗಳಲ್ಲಿ ಎಸಿ ವ್ಯವಸ್ಥೆ ಹಾಗೂ ಸಮರ್ಪಕವಾದ ನೀರಿನ ವ್ಯವಸ್ಥೆ ಸೇರಿದಂತೆ ಮಕ್ಕಳ ಆರೋಗ್ಯ ಸ್ಥಿತಿಯ ಮೇಲೆ ಪರಿಣಾಮ ಆಗದಿರುವಂತೆ ಅಗತ್ಯ ವ್ಯವಸ್ಥೆಗಳು ಕೈಗೊಂಡು ಖಾಸಗಿ ಶಾಲೆಗಳು ಮೇ 29ರಿಂದ ಪ್ರಾರಂಭಿಸಬಹುದಾಗಿದೆ. ಆದರೆ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿದು ನೀರಿನ ಕೊರತೆ ಇದೆ. ಶಾಲೆಗಳಲ್ಲಿ ಬೋರ್ವೆಲ್ಗಳು ಬತ್ತಿದ್ದು, ಕುಡಿಯುವ ನೀರಿನ ಸಮಸ್ಯೆ ಇದೆ. ಎಸಿಗಳ ವ್ಯವಸ್ಥೆಯೂ ಇಲ್ಲದ ಕಾರಣ ಜಿಲ್ಲೆಯ ಬಹುತೇಕ ಖಾಸಗಿ ಶಾಲೆಗಳು ಜೂ. 14ರಿಂದ ಪ್ರಾರಂಭಗೊಳ್ಳಲಿವೆ ಎಂದು ಡಿಡಿಪಿಐ ತಿಳಿಸಿದ್ದಾರೆ.
15 ದಿನದ ಮಕ್ಕಳ ಪಾಠ?
ಬಿಸಿಲಿನ ಹಿನ್ನೆಲೆ 15 ದಿನಗಳ ಕಾಲ ವಿಳಂಬವಾಗಿ ಶಾಲೆಗಳು ಪ್ರಾರಂಭಗೊಳ್ಳುತ್ತಿರುವ ಹಿನ್ನೆಲೆ ಮಕ್ಕಳ ಶಿಕ್ಷಣಕ್ಕೆ ಹಿನ್ನಡೆ ಉಂಟಾಗಲಿದೆ. ಇದನ್ನು ತಪ್ಪಿಸಲು ಪ್ರತಿ ಶನಿವಾರ ಇಡೀ ದಿನ ತರಗತಿ ಹಾಗೂ ರಜೆ ದಿನಗಳಲ್ಲಿ ಹೆಚ್ಚುವರಿ ತರಗತಿಗಳನ್ನು ನಡೆಸಿ ಹಿನ್ನಡೆಯಾದ ವಿದ್ಯಾಭ್ಯಾಸ ಸರಿದೂಗಿಸಲು ಸರ್ಕಾರ ಯೋಜನೆ ರೂಪಿಸಿದೆ.