ಬೆಂಗಳೂರು:ಮೈಸೂರು ಜಿಲ್ಲಾಧಿಕಾರಿ ಹುದ್ದೆಗೆ ರೋಹಿಣಿ ಸಿಂಧೂರಿ ನೇಮಕ ಮಾಡಿದ ಪ್ರಕರಣದಲ್ಲಿ ಕೇಂದ್ರ ಆಡಳಿತಾತ್ಮಕ ನ್ಯಾಯಾಧಿಕರಣ (ಸಿಎಟಿ) ನೀಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ಐಎಎಸ್ ಅಧಿಕಾರಿ ಬಿ. ಶರತ್ ಅವರಿಗೆ ನೋಟಿಸ್ ಜಾರಿ ಮಾಡಿದೆ.
ರೋಹಿಣಿ ಸಿಂಧೂರಿ ವರ್ಗಾವಣೆ ಪ್ರಶ್ನಿಸಿ ಐಎಎಸ್ ಅಧಿಕಾರಿ ಬಿ. ಶರತ್ ಸಿಎಟಿಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಸಿಎಟಿ ವರ್ಗಾವಣೆ ಆದೇಶವನ್ನು ಮರುಪರಿಶೀಲಿಸುವಂತೆ ಸರ್ಕಾರಕ್ಕೆ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ಇಂದು ಹಿರಿಯ ನ್ಯಾಯಮೂರ್ತಿ ಅರವಿಂದ ಕುಮಾರ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರನ್ನು ಬೇರೊಂದು ಹುದ್ದೆಗೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದರು. ಹೇಳಿಕೆ ದಾಖಲಿಸಿಕೊಂಡ ಪೀಠ, ಪ್ರತಿವಾದಿ ಅಧಿಕಾರಿ ಬಿ.ಶರತ್ ಅವರಿಗೆ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಜೂನ್ 14ಕ್ಕೆ ಮುಂದೂಡಿತು. ಜತೆಗೆ, ಅಂದೇ ಅರ್ಜಿಯ ಅಂತಿಮ ವಿಚಾರಣೆ ನಡೆಸುವುದಾಗಿ ತಿಳಿಸಿತು.
ಮೈಸೂರು ಜಿಲ್ಲಾಧಿಕಾರಿ ಹುದ್ದೆಗೆ ರೋಹಿಣಿ ಸಿಂಧೂರಿ ಅವರನ್ನು ನೇಮಕ ಮಾಡಿದ ಆದೇಶವನ್ನು ಮರು ಪರಿಶೀಲಿಸುವಂತೆ ಸರ್ಕಾರಕ್ಕೆ ಸೂಚಿಸಿದ ಸಿಎಟಿಯ ಆದೇಶ ಪ್ರಶ್ನಿಸಿ ಬಿ.ಶರತ್ ಕೂಡ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಹಾಗೆಯೇ ಸರ್ಕಾರ ಕೂಡ ಅರ್ಜಿ ಸಲ್ಲಿಸಿದ್ದು, ಎರಡೂ ಅರ್ಜಿಗಳನ್ನು ಒಟ್ಟಿಗೆ ವಿಚಾರಣೆ ನಡೆಸಿ ಇತ್ಯರ್ಥಗೊಳಿಸಲು ಹೈಕೋರ್ಟ್ ಮುಂದಾಗಿದೆ.