ನವದೆಹಲಿ: ಪ್ರಧಾನಿ ಮೋದಿ ಈ ವಾರಾಂತ್ಯದಲ್ಲಿ ನೆರೆಯ ದೇಶಗಳಾದ ಶ್ರೀಲಂಕಾ ಹಾಗೂ ಮಾಲ್ಡೀವ್ಸ್ಗೆ ಭೇಟಿ ನೀಡಲಿದ್ದು, ಹಲವು ಅಭಿವೃದ್ಧಿ ಯೋಜನೆಗಳಿಗೆ ಅಡಿಗಲ್ಲು ಹಾಕಲಿದ್ದಾರೆ.
'ನೆರೆಯವರೇ ಮೊದಲು' ಎನ್ನುವ ತತ್ವದಂತೆ ನರೇಂದ್ರ ಮೋದಿ ತಾವು ಪ್ರಧಾನಿಯಾಗಿ ಪುನರಾಯ್ಕೆಯಾದ ಬಳಿಕ ಮೊಟ್ಟ ಮೊದಲ ವಿದೇಶ ಪ್ರವಾಸದಲ್ಲಿ ಭಾರತದ ನೆರೆಯ ರಾಷ್ಟ್ರಗಳಿಗೆ ಭೇಟಿ ನೀಡುತ್ತಿದ್ದಾರೆ.
ಶನಿವಾರದಂದು ಮೋದಿ ಮಾಲ್ಡೀವ್ಸ್ ಸಂಸತ್ತು ಉದ್ಧೇಶಿಸಿ ಭಾಷಣ ಮಾಡಲಿದ್ದಾರೆ. ಇದೇ ದಿನ ಭಾರತಕ್ಕೆ ಆರ್ಥಿಕವಾಗಿ ಸಹಕಾರ ನೀಡಿದ್ದ ಎರಡು ಪ್ರಮುಖ ಪ್ರಾಜೆಕ್ಟ್ಗಳಾದ ಕರಾವಳಿ ರಾಡಾರ್ ಸಿಸ್ಟಮ್ ಹಾಗೂ ದ್ವೀಪಸಮೂಹದ ರಕ್ಷಣಾ ಪಡೆಗಳ ತರಬೇತಿ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ.
ಮಾಲ್ಡೀವ್ಸ್ನಲ್ಲಿ ಭಾರತದ ಸಹಕಾರದೊಂದಿಗೆ ನಿರ್ಮಾಣ ಮಾಡಲಿರುವ ಭಾರತಕ್ಕೆ ದೋಣಿ ಸೇವೆ, ರಾಷ್ಟ್ರೀಯ ಕ್ರಿಕೆಟ್ ಮೈದಾನದ ಕುರಿತಾಗಿ ಅಧ್ಯಕ್ಷ ಇಬ್ರಾಹಿಂ ಸೋಲಿ ಜೊತೆಗೆ ಪ್ರಧಾನಿ ಮೋದಿ ಮಾತುಕತೆ ನಡೆಸಲಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ತಿಳಿಸಿದ್ದಾರೆ.
ಭಾನುವಾರದಂದು ಮೋದಿ ದ್ವೀಪ ರಾಷ್ಟ್ರ ಶ್ರೀಲಂಕಾಗೆ ಬಂದಿಳಿಯಲಿದ್ದಾರೆ. ತಿಂಗಳ ಹಿಂದೆ ರಾಜಧಾನಿ ಕೊಲಂಬೋದಲ್ಲಿ ನಡೆದಿದ್ದ ಭೀಕರ ಬಾಂಬ್ ದಾಳಿಯ ಕುರಿತಂತೆ ಮೋದಿ ಪ್ರಮುಖವಾಗಿ ಮಾತುಕತೆ ನಡೆಸುವ ಸಾಧ್ಯತೆ ಇದೆ. ಜೊತೆಗೆ ಉಗ್ರರ ನಿರ್ಮೂಲನೆಗೆ ಶ್ರೀಲಂಕಾಗೆ ಭಾರತ ಬೆಂಬಲ ಸೂಚಿಸಲಿದೆ.
ಚೀನಾ ಕಳೆದ ಕೆಲ ವರ್ಷಗಳಿಂದ ಮಾಲ್ಡೀವ್ಸ್ ಹಾಗೂ ಶ್ರೀಲಂಕಾ ದೇಶಗಳ ಮೇಲೆ ತನ್ನ ಹಿಡಿತ ಸಾಧಿಸಲು ಹವಣಿಸುತ್ತಿದೆ. ಜಾಗತಿಕ ಮಟ್ಟದಲ್ಲಿ ಭಾರತದ ನಡೆಯನ್ನು ಹಣಿಯಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲೇ ಮೋದಿಯ ಎರಡು ದಿನದ ದ್ವೀಪರಾಷ್ಟ್ರಗಳ ಭೇಟಿ ರಾಜತಾಂತ್ರಿಕ ನೆಲೆಯಲ್ಲಿ ಮಹತ್ವ ಪಡೆದುಕೊಂಡಿದೆ.