ಬೆಂಗಳೂರು: ಕೋವಿಡ್ ರೋಗ ಲಕ್ಷಣವಿದ್ದರೂ ಪರೀಕ್ಷೆಯಲ್ಲಿ ನೆಗೆಟಿವ್ ಕಂಡುಬರುವವರ ಆರೋಗ್ಯ ರಕ್ಷಣೆಗೆ ಸಿಂಡ್ರೋಮಿಕ್ ವಿಧಾನ ಅನುಸರಿಸಿ ಆಸ್ಪತ್ರೆಗೆ ದಾಖಲಿಸಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಸಿಂಡ್ರೋಮಿಕ್ ವಿಧಾನ ಅನುಸರಿಸಿ, ರೋಗಿಗಳ ದಾಖಲಾತಿ; ಸಚಿವ ಡಾ.ಕೆ.ಸುಧಾಕರ್
ವ್ಯಕ್ತಿಗೆ ಕೋವಿಡ್ ರೋಗ ಲಕ್ಷಣವಿದ್ದರೂ ವರದಿಯಲ್ಲಿ ನೆಗೆಟಿವ್ ಬರುವುದರಿಂದ, ರೋಗ ತೀವ್ರತೆ ಹೆಚ್ಚಾದ ಸಮಯದಲ್ಲಿ ಆಸ್ಪತ್ರೆಗೆ ದಾಖಲಿಸಲು ಸಮಸ್ಯೆಯಾಗುತ್ತದೆ.
ಹಲವು ಪ್ರಕರಣಗಳಲ್ಲಿ ಆರ್ಟಿ-ಪಿಸಿಆರ್ ಅಥವಾ ರಾಪಿಡ್ ಆ್ಯಂಟಿಜೆನ್ ಪರೀಕ್ಷೆ ಮಾಡಿಸಿದರೂ ನೆಗೆಟಿವ್ ವರದಿ ಬರುತ್ತಿದೆ. ವ್ಯಕ್ತಿಗೆ ಕೋವಿಡ್ ರೋಗ ಲಕ್ಷಣವಿದ್ದರೂ ವರದಿಯಲ್ಲಿ ನೆಗೆಟಿವ್ ಬರುವುದರಿಂದ, ರೋಗ ತೀವ್ರತೆ ಹೆಚ್ಚಾದ ಸಮಯದಲ್ಲಿ ಆಸ್ಪತ್ರೆಗೆ ದಾಖಲಿಸಲು ಸಮಸ್ಯೆಯಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಹಾಗೂ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವ ಉದ್ದೇಶದಿಂದ ಸಿಂಡ್ರೋಮಿಕ್ ವಿಧಾನ ಅನುಸರಿಸಲು ತೀರ್ಮಾನಿಸಲಾಗಿದೆ.
ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ ಎಂದು ಸಚಿವರು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ. ಈ ವಿಧಾನದಲ್ಲಿ ಸಂಬಂಧಪಟ್ಟ ವೈದ್ಯರು ಅಥವಾ ವೈದ್ಯಾಧಿಕಾರಿಗಳೇ ರೋಗಿಗಳ ಸ್ಥಿತಿಯನ್ನು ಪ್ರಮಾಣೀಕರಿಸುತ್ತಾರೆ. ನಂತರ ರೋಗಿಗೆ ಪ್ರತ್ಯೇಕ ಸಂಖ್ಯೆ ನೀಡಿ ಗುರುತಿಸಿ, ನಿರ್ದಿಷ್ಟ ಆಸ್ಪತ್ರೆಯಲ್ಲಿ ಹಾಸಿಗೆ ಲಭ್ಯವಾಗಿಸಲಾಗುತ್ತದೆ. ಇವರನ್ನು ಕೊರೊನಾ ರೋಗಿ ಎಂದೇ ಪರಿಗಣಿಸಲಾಗಿತ್ತದೆ. ರೋಗಿಗೆ ಸೂಕ್ತ ಸಮಯದಲ್ಲಿ ಅಗತ್ಯ ಚಿಕಿತ್ಸೆ ನೀಡಬೇಕಿರುವುದರಿಂದ ಈ ವಿಧಾನವನ್ನು ಅನುರಿಸಲು ನಿರ್ಧರಿಸಲಾಗಿದೆ. ಈ ವಿಧಾನ ಅನುಸರಿಸುವ ಕುರಿತು ಎಲ್ಲ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.