ಬಾಲಾಸೋರ್(ಒಡಿಶಾ): ಹದಿನೇಳನೇ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದು, ಅದಾಗಲೇ ಆರು ದಿನಗಳು ಕಳೆದಿದ್ದು, ಬಿಜೆಪಿಯ ಒಬ್ಬ ಸಂಸದ ಕಳೆದ ಕೆಲ ದಿನಗಳಿಂದ ಸುದ್ದಿಯಲ್ಲಿದ್ದಾರೆ.
ಪ್ರತಾಪ್ ಚಂದ್ರ ಸಾರಂಗಿ, ಸರಳತೆ ಅನ್ವರ್ಥನಾಮ ಎನ್ನುವಂತಿರುವ ಈ ವ್ಯಕ್ತಿ ಈಗಾಗಲೇ ಎರಡು ಬಾರಿ ಶಾಸಕರಾಗಿ ಚುನಾಯಿತರಾಗಿದ್ದರು. ಇದೀಗ ಲೋಕಸಭಾ ಚುನಾವಣೆಯಲ್ಲಿ ಒಡಿಶಾದ ಬಾಲಾಸೋರ್ ಕ್ಷೇತ್ರದಿಂದ ಗೆದ್ದು ಸಂಸತ್ ಪ್ರವೇಶಿಸಿದ್ದಾರೆ.
ಮಕ್ಕಳೊಂದಿಗೆ ಪ್ರತಾಪ್ ಚಂದ್ರ ಸಾರಂಗಿ ಬಿಜು ಜನತಾ ದಳದ ತೀವ್ರ ಸ್ಪರ್ಧೆಯ ನಡುವೆ 64 ವರ್ಷದ ಪ್ರತಾಪ್ ಚಂದ್ರ ಸಾರಂಗಿ 12,956 ಮತಗಳಿಂದ ಗೆಲುವು ಸಾಧಿಸಿದ್ದಾರೆ.
2004 ಹಾಗೂ 2009ರಲ್ಲಿ ನೀಲಗಿರಿ ಕ್ಷೇತ್ರದಿಂದ ಭಾರತೀಯ ಜನತಾ ಪಾರ್ಟಿಯ ಶಾಸಕರಾಗಿ ಆಯ್ಕೆಯಾಗಿದ್ದ ಸಾರಂಗಿ ತಮ್ಮ ಸರಳತೆಯ ಮೂಲಕ ಜನತೆಯ ಮನ ಗೆದ್ದಿದ್ದಾರೆ. ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕು ಸಾಗಿಸುತ್ತಿರುವ ಪ್ರತಾಪ್ ಚಂದ್ರ ಸಾರಂಗಿ, ಈಗಲೂ ಸಣ್ಣ ಜೋಪಡಿಯಲ್ಲಿ ವಾಸಿಸುತ್ತಿದ್ದಾರೆ. ತಮ್ಮ ಓಡಾಟಕ್ಕೆ ಸೈಕಲನ್ನೇ ನೆಚ್ಚಿಕೊಂಡಿದ್ದಾರೆ.
ಚುನಾವಣಾ ಪ್ರಚಾರದಲ್ಲಿ ಪ್ರತಾಪ್ ಚಂದ್ರ ಸಾರಂಗಿ ಪ್ರತಾಪ್ ಚಂದ್ರ ಸಾರಂಗಿ, ಆರೆಸ್ಸೆಸ್ ಕಟ್ಟಾಳು. ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ವಂಚಿತರಿಗಾಗಿ 80ರ ದಶಕದಲ್ಲಿ ಏಕಲ್ ವಿದ್ಯಾಲಯವನ್ನು ಸಾರಂಗಿ ಆರಂಭಿಸಿದ್ದರು.
ತಮ್ಮ ಅಭ್ಯರ್ಥಿಗಳು ಸಾಕಷ್ಟು ಹಣ ಖರ್ಚು ಮಾಡಿ ಭರ್ಜರಿ ಪ್ರಚಾರ ನಡೆಸಿದ್ದರೆ ಇತ್ತ ಸಾರಂಗಿ, ಆಟೋರಿಕ್ಷಾ ಮೂಲಕ ಕೆಲ ಕಾರ್ಯಕರ್ತರೊಂದಿಗೆ ಪ್ರಚಾರ ಮಾಡಿದ್ದರು.
ನರೇಂದ್ರ ಮೋದಿ ಜೊತೆಗೆ ಪ್ರತಾಪ್ ಚಂದ್ರ ಸಾರಂಗಿ "ಸಂಸದನಾದ ಬಳಿಕ ನನ್ನ ಬದುಕು ಅಥವಾ ಜೀವನಶೈಲಿಯಲ್ಲಿ ಯಾವುದೇ ಬದಲಾವಣೆಗಳು ಆಗುವುದಿಲ್ಲ. ಜನತೆಗಾಗಿ ಬದುಕು ಸಾಗಿಸುವುದರಲ್ಲಿ ನಾನು ನಂಬಿಕೆ ಇರಿಸಿದ್ದೇನೆ. ಇದನ್ನೇ ನನ್ನ ಜೀವನದುದ್ದಕ್ಕೂ ಇದನ್ನೇ ಪಾಲಿಸುತ್ತೇನೆ" ಎಂದು ಪ್ರತಾಪ್ ಚಂದ್ರ ಸಾರಂಗಿ ನುಡಿದಿದ್ದಾರೆ.