ಗುವಾಹಟಿ: ಇಂಡಿಯಾ ಓಪನ್ ಬಾಕ್ಸಿಂಗ್ ಟೂರ್ನಿಯಲ್ಲಿ ಭಾರತದ 6 ಬಾರಿಯ ವಿಶ್ವ ಚಾಂಪಿಯನ್ ಮೇರಿಕೋಮ್ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಗುವಾಹಟಿಯಲ್ಲಿ ಮಂಗಳವಾರ ನಡೆದ ಮಹಿಳೆಯರ 51 ಕೆ.ಜಿ. ವಿಭಾಗದ ಮೊದಲ ಸುತ್ತಿನ ಪೈಪೋಟಿಯಲ್ಲಿ ಮೇರಿ 5-0 ಅಂಕಗಳಿಂದ ನೇಪಾಳದ ಮಾಲಾ ರಾಯ್ ಅವರನ್ನು ಮಣಿಸಿ ಸೆಮಿಫೈನಲ್ಗೆ ಲಗ್ಗೆಯಿಟ್ಟರು.
ಕರ್ಮಬೀರ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ನೂರಾರು ಅಭಿಮಾನಿಗಳು ಮೇರಿಯನ್ನು ಬೆಂಬಲಿಸಿ ಚೀರುತ್ತಿದ್ದರೆ, ಇತ್ತ ರಿಂಗ್ನೊಳಗೆ ಕೋಮ್ ತಮ್ಮ ಬಲಿಷ್ಠ ಪಂಚ್ಗಳ ಮೂಲಕ ಎದುರಾಳಿಯನ್ನು ಹೈರಾಣಾಗಿಸಿದರು.
ಲಂಡನ್ ಒಲಿಂಪಿಕ್ನ ಕಂಚಿನ ವಿಜೇತೆಯಾಗಿರುವ ಮೇರಿ ಮುಂದೆ ನೇಪಾಳದ ಮಾಲಾ ರೈ ಪೈಪೋಟಿ ನೀಡಲಾರದಾದರು. ಪಂದ್ಯದ ನಂತರ ಮಾತನಾಡಿದ ಕೋಮ್ 'ನೇಪಾಳದ ಬಾಕ್ಸರ್ ಅನುಭವಿ ಹಾಗೂ ಬಲಿಷ್ಠರಾಗಿದ್ದರೂ, ಅವರ ವಿರುದ್ಧ ಗೆಲುವು ಸಾಧಿಸಿದ್ದು ತುಂಬಾ ಖುಷಿತಂದಿದೆ. ನಾವೆಲ್ಲರು ದೇಶಕ್ಕೇ ಕೀರ್ತಿ ತರಲು ನಾವೆಲ್ಲರು ಪ್ರಯತ್ನಿಸಬೇಕೆಂದರು.
ಮೇರಿಕೋಮ್ ಸೆಮಿಫೈನಲ್ ಪಂದ್ಯದಲ್ಲಿ ಏಷ್ಯನ್ ಚಾಂಪಿಯನ್ಷಿಪ್ನಲ್ಲಿ ಕಂಚಿನ ಪದಕ ಪಡೆದಿರುವ ತೆಲಂಗಾಣದ ನಿಖತ್ ಝರೀನ್ ಅವರನ್ನು ಎದುರಿಸಲಿದ್ದಾರೆ.
60 ಕೆ.ಜಿ. ವಿಭಾಗದಲ್ಲಿ ಸರಿತಾ ದೇವಿ, 64 ಕೆ.ಜಿ. ವಿಭಾಗದಲ್ಲಿ ಅಂಕುಶಿತಾ ಬೋರೊ ಸೆಮಿಫೈನಲ್ ಪ್ರವೇಶಿಸಿದರು.