ಬೆಂಗಳೂರು: ವಾರಾಂತ್ಯಕ್ಕೆ ಬೆಂಗಳೂರಿಗರನ್ನು ಕೈಬೀಸಿ ಕರೆಯುತ್ತಿದೆ ಲಾಲ್ ಬಾಗ್. ಇಲ್ಲಿನ ತರಹೇವಾರಿ ಮಾವು, ಹಲವು ಫಲ ಪ್ರಿಯರ ಸವಿ ತಣಿಸುತ್ತಿದೆ. ಸಸ್ಯಕಾಶಿ ಬೆಂಗಳೂರಿನ ಲಾಲ್ ಬಾಗ್ನಲ್ಲಿ ಮೇ 30ರಿಂದ ಜೂನ್ 24ರವರೆಗೆ ನಡೆಯುತ್ತಿರುವ ಮಾವು ಮತ್ತು ಹಲಸು ಮೇಳದಲ್ಲಿ 120ಕ್ಕೂ ಅಧಿಕ ಮಳಿಗೆಗಳನ್ನು ಹಾಕಲಾಗಿದೆ.
ಮೇಳಕ್ಕೆ ಮೇ 30ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಚಾಲನೆ ನೀಡಿದ್ದರು. ಭಾನುವಾರ ರಜೆ ಇರುವುದರಿಂದ ಬೆಂಗಳೂರಿನ ಜನಸಾಗರವೇ ಇತ್ತ ಧಾವಿಸಿತ್ತು. ಇಲ್ಲಿ ಮಾವಿನ 50ಕ್ಕೂ ಹೆಚ್ಚು ವಿವಿಧ ತಳಿಯ ಹಣ್ಣುಗಳು ಲಭ್ಯವಾಗಿದ್ದು, ಮಾವು ಪ್ರಿಯರ ಮನ ಗೆದ್ದಿದೆ. ವಿವಿಧ ತಳಿಯ ಹಲಸಿನ ಗಾತ್ರ, ರುಚಿ ಮೇಳದ ಮೆರಗನ್ನು ಹೆಚ್ಚಿಸಿದೆ. ಸದ್ಯ ಬೆಂಗಳೂರಿಗರು ಫಲ ಖರೀದಿ ಹಾಗೂ ಸವಿಯುವುದರಲ್ಲಿ ನಿರತರಾಗಿದ್ದಾರೆ.