ಕೊಲಂಬೋ(ಶ್ರೀಲಂಕಾ): ನೆರೆಯ ದ್ವೀಪರಾಷ್ಟ್ರದಲ್ಲಿ ನಡೆದ ಭೀಕರ ಬಾಂಬ್ ಸ್ಫೋಟದ ರೂವಾರಿಗಳು ಕಾಶ್ಮೀರ,ಕೇರಳ ಹಾಗು ಬೆಂಗಳೂರಿಗೆ ಭೇಟಿ ಕೊಟ್ಟಿರುವ ವಿಚಾರವನ್ನು ಶ್ರೀಲಂಕಾ ಸೇನೆ ಮುಖ್ಯಸ್ಥರು ಬಹಿರಂಗಪಡಿಸಿದ್ದಾರೆ.
ಬೆಂಗಳೂರು, ಕಾಶ್ಮೀರ, ಕೇರಳಕ್ಕೆ ಭೇಟಿ ಕೊಟ್ಟಿದ್ದ ಲಂಕಾ ಆತ್ಮಹತ್ಯಾ ಬಾಂಬರುಗಳು..!
ಶ್ರೀಲಂಕಾ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಸುದ್ದಿಯೊಂದು ಗೊತ್ತಾಗಿದೆ. ಶ್ರೀಲಂಕಾದಲ್ಲಿ ರಕ್ತಪಾತ ನಡೆಸಿದ ಭಯೋತ್ಪಾದಕರು ದಾಳಿ ಸಂಬಂಧ ತರಬೇತಿ ಪಡೆಯಲು ಭಾರತಕ್ಕೆ ಆಗಮಿಸಿದ್ದರು. ಈ ವಿಚಾರವನ್ನು ಸ್ವತ: ಅಲ್ಲಿನ ಸೇನಾ ಮುಖ್ಯಸ್ಥರೇ ತಿಳಿಸಿದ್ದಾರೆ.
ಕೊಲಂಬೋದ ಐಷಾರಾಮಿ ಹೊಟೇಲುಗಳು ಮತ್ತು ಕ್ರಿಶ್ಚಿಯನ್ ಪ್ರಾರ್ಥನಾ ಮಂದಿರಗಳನ್ನೇ ಗುರಿಮಾಡಿದ 9 ಮಂದಿ ಆತ್ಮಹತ್ಯಾ ಬಾಂಬರ್‌ಗಳು ನಡೆಸಿದ ಸರಣಿ ಸ್ಫೋಟದಲ್ಲಿ 253 ಮಂದಿ ಸಾವಿಗೀಡಾಗಿ 500 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಆತ್ಮಹತ್ಯಾ ಬಾಂಬರುಗಳಲ್ಲಿ ಕೆಲವರು ದಾಳಿ ಸಂಬಂಧ ತರಬೇತಿಗಾಗಿ ಅಥವಾ ಕೆಲವು ದೇಶಿ, ವಿದೇಶಿ ಭಯಾತ್ಪಾದಕರ ಗುಂಪುಗಳ ಜೊತೆ ಸಂಪರ್ಕ ಸಾಧಿಸುವುದಕ್ಕೆ ಕಾಶ್ಮೀರ ಮತ್ತು ಕೇರಳ ಬಂದಿರುವುದಾಗಿ ಶ್ರೀಲಂಕಾದ ಲೆಫ್ಟಿನೆಂಟ್ ಜನರಲ್ ಮಹೇಶ್ ಸೇನನಾಯಕೆ ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.
ಇನ್ನೂ ವಿಶೇಷ ಅಂದ್ರೆ ಈ ದಾಳಿಕೋರರು ಕೇರಳಕ್ಕೆ ಹೋಗುವ ಮುನ್ನ ದೇಶದ ಐಟಿ ಹಬ್ ಬೆಂಗಳೂರಿಗೂ ಬಂದಿದ್ದರು ಎಂದು ಇದೇ ವೇಳೆ ಅವರು ತಿಳಿಸಿದರು.
ಲಂಕಾ ಗುರಿ ಮಾಡಲು ಕಾರಣವೇನು?
ಈ ಪ್ರಶ್ನೆಗೆ ಉತ್ತರಿಸಿದ ಸೇನನಾಯಕೆ, ದೇಶದಲ್ಲಿ ಕಳೆದ 30 ವರ್ಷಗಳಲ್ಲಿ ಏನು ನಡೆದಿದೆ ಅನ್ನೋದನ್ನು ಇಲ್ಲಿನ ಜನರು ಮರೆತು, ಶಾಂತಿಯನ್ನು ಸಂಭ್ರಮಿಸುತ್ತಿದ್ದರು. ಆದರೆ, ಈ ವೇಳೆ ಅವರೆಲ್ಲಾ ಭದ್ರತೆಯನ್ನು ಕಡೆಗಣಿಸಿದರು. ದೇಶದಲ್ಲಿದ್ದ ಅತಿಯಾದ ಸ್ವಾತಂತ್ರ್ಯ ಮತ್ತು ಶಾಂತಿಯೇ ಭಯೋತ್ಪಾದಕರು ಟಾರ್ಗೆಟ್ ಮಾಡಲು ಕಾರಣವಾಗಿದೆ ಎಂದು ಲಂಕಾ ಸೇನಾ ಮುಖ್ಯಸ್ಥರು ವಿಶ್ಲೇಷಣೆ ಮಾಡಿದರು.
ಈ ಸ್ಫೋಟದ ಹೊಣೆಯಲ್ಲಿ ಐಸಿಸ್ ಭಯೋತ್ಪಾದಕರು ಒಪ್ಪಿಕೊಂಡಿದ್ದರೂ, ಶ್ರೀಲಂಕಾ ಸರ್ಕಾರ ಅಲ್ಲಿನ ಸ್ಥಳೀಯ ಮುಸ್ಲೀಂ ತೀವ್ರವಾದಿ ಬಣ ನ್ಯಾಷನಲ್ ತೌಹೀದ್ ಜಮಾತ್ ವಿರುದ್ಧ ಹೊಣೆ ಹೊರಿಸಿತ್ತು.