ಮಂಡ್ಯ: ಮದ್ದೂರು ತಾಲೂಕಿನ ಗೆಜ್ಜಲಗೆರೆ ಜಿಲ್ಲಾ ಹಾಲು ಒಕ್ಕೂಟದಲ್ಲಿ ನಡೆದಿರುವ ಟ್ಯಾಂಕರ್ ಹಾಲಿಗೆ ನೀರು ಮಿಶ್ರಣ ಮಾಡಿರುವ ಪ್ರಕರಣವನ್ನು ಉನ್ನತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣ ಗೌಡ ತಿಳಿಸಿದರು.
ಒಕ್ಕೂಟಕ್ಕೆ ಬಿಎಂಸಿ ಕೇಂದ್ರಗಳಿಂದ ಟ್ಯಾಂಕರ್‌ಗಳ ಮೂಲಕ ತರುವ ಹಾಲಿಗೆ ನೀರು ಮಿಶ್ರಣ ಮಾಡುತ್ತಿರುವ ಹಗರಣ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಒಕ್ಕೂಟಕ್ಕೆ ಅಗಮಿಸಿ ಮನ್‌ಮುಲ್ ಅಡಳಿತ ಮಂಡಳಿ ಸದಸ್ಯರು ಮತ್ತು ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿ, ಹಾಲಿಗೆ ನೀರು ಮಿಶ್ರಣ ಮಾಡುವ ಮೂಲಕ ಒಕ್ಕೂಟಕ್ಕೆ ಲಕ್ಷಾಂತರ ರೂ.ನಷ್ಟ ಮಾಡಲಾಗಿದೆ. ಇದನ್ನು ಇಲ್ಲಿಯ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಕಂಡು ಹಿಡಿದಿರುವುದು ಅಭಿನಂದನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತನಿಖೆಯಿಂದ ಸತ್ಯ ಬಯಲು:
ರಾಜ್ಯದ 14 ಒಕ್ಕೂಟಗಳಲ್ಲಿ ಇಂತಹ ಹಗರಣಗಳು ನಡೆಯುತ್ತಿವೆ ಎಂಬ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಅಲ್ಲೂ ಈ ಸಂಬಂಧ ಸೂಕ್ತ ತನಿಖೆ ನಡೆಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಇದು ರೈತರ ಒಕ್ಕೂಟ, ರೈತರ ಅಭಿವೃದ್ಧಿಗಾಗಿ ಇರುವ ಒಕ್ಕೂಟ, ನಷ್ಟ ಹೊಂದಲು ನಾನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಸಚಿವರು ಹೇಳಿದರು.
ಹಗರಣ ಸಂಬಂಧ ಉನ್ನತ ತನಿಖೆ ನಡೆಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಲಾಗಿದೆ. ಪ್ರಕರಣದಲ್ಲಿ ಯಾರಾರು ಭಾಗಿಯಾಗಿದ್ದಾರೆ ಎಂಬುದು ತನಿಖೆಯಿಂದ ತಿಳಿಯಲಿದೆ ಎಂದರು.
ಅಧಿಕಾರಿಗಳು ಹೆದರಬೇಕಿಲ್ಲ:
ಒಕ್ಕೂಟದಲ್ಲಿರುವ ಅಧಿಕಾರಿಗಳು ಕಳ್ಳರಿಗೆ ಯಾವುದೇ ರೀತಿಯಲ್ಲಿ ಹೆದರಿಕೊಳ್ಳುವುದು ಬೇಡ. ನಿಮಗೆ ಅಂತಹ ಭಯವಿದ್ದು, ರಕ್ಷಣೆ ಬೇಕೆನಿಸಿದರೆ ಎಸ್ಪಿ ಅವರಿಗೆ ಹೇಳಿ ವಿಶೇಷ ರಕ್ಷಣೆ ಕೊಡಿಸುತ್ತೇನೆ. ನಿಮಗಾಗಿ ಟೋಲ್ ಫ್ರೀ ಮಾಡುವ ಮೂಲಕ ರಜಾ ದಿನಗಳಲ್ಲೂ ನಿಮಗೆ ರಕ್ಷಣೆ ನೀಡುವ ಕೆಲಸ ಮಾಡಲಾಗುವುದು ಎಂದು ಸಚಿವ ಕೆ.ಸಿ.ನಾರಾಯಗೌಡ ಅಧಿಕಾರಿಗಳಿಗೆ ಭರವಸೆ ನೀಡಿದರಲ್ಲದೇ ಹೈನೋದ್ಯಮವನ್ನು ಮಹಿಳೆಯರು ಹೆಚ್ಚಾಗಿ ಅವಲಂಬಿಸಿದ್ದಾರೆ. ಈ ಹಿನ್ನೆಲೆ ಅವರಿಗೆ ಮೋಸವಾಗಲು ನಾನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಭರವಸೆ ನೀಡಿದರು.
ರಾಜ್ಯದ ಇತರ ಒಕ್ಕೂಟದಲ್ಲೂ ಹಗರಣ ಸಾಧ್ಯತೆ :
ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ರಾಮಚಂದ್ರು ಮಾತನಾಡಿ, ರಾಜ್ಯದ ಎಲ್ಲ ಒಕ್ಕೂಟದಲ್ಲೂ ಇಂತಹ ಹಗರಣ ನಡೆಯುತ್ತಿರುವ ಸಾಧ್ಯತೆ ಇದೆ. ಈ ಸಂಬಂಧ ಕೆಎಂಎಫ್ ಅಧ್ಯಕ್ಷರಿಗೆ, ಮೈಸೂರು ಒಕ್ಕೂಟದ ಅಧ್ಯಕ್ಷರಿಗೆ ದೂರು ನೀಡಲಾಗಿದೆ. ಬೇರೆ ಒಕ್ಕೂಟದ ಅಧಿಕಾರಿಗಳು ಇಲ್ಲಿ ನಡೆದಿರುವ ಹಗರಣವನ್ನು ಪರಿಶೀಲನೆ ಮಾಡಿದ್ದಾರೆ. ಒಕ್ಕೂಟದ ಎಲ್ಲ ನಿರ್ದೇಶಕರು ಪಕ್ಷಾತೀತವಾಗಿ ಇಂತಹ ಹಗರಣವನ್ನು ಬಯಲಿಗೆ ಎಳೆಯಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.