ನವದೆಹಲಿ: ಐಸಿಸ್ ನಾಯಕ ಎನ್ನಲಾಗುವ ಅಬು ಬಕರ್ ಅಲ್-ಬಗ್ದಾದಿ ಮಾತಿನ ತುಣುಕು ಹೊಂದಿರುವ ವಿಡಿಯೋ ಒಂದನ್ನು ಐಸಿಸ್ ರಿಲೀಸ್ ಮಾಡಿದೆ.
ಜುಲೈ 2014ರ ಬಳಿಕ ಐಸಿಸ್ ನಾಯಕ ಮತ್ತೆ ಕಾಣಿಸಿಕೊಂಡಿದ್ದು, ಸಾವಿನ ಊಹಾಪೋಹಕ್ಕೆ ಈ ವಿಡಿಯೋ ತೆರೆ ಎಳೆದಿದೆ. 2015ರಲ್ಲಿ ಮೊಸುಲ್ನಲ್ಲಿ ನಡೆದ ವಾಯುದಾಳಿಯ ವೇಳೆ ಬಗ್ದಾದಿ ಗಂಭೀರವಾಗಿ ಗಾಯಗೊಂಡಿದ್ದ ಎಂದು ವರದಿಯಾಗಿತ್ತು.
ವಿಡಿಯೋದಲ್ಲಿ ಅಬು ಬಕರ್ ಅಲ್-ಬಗ್ದಾದಿ ಕುಳಿತುಕೊಂಡು ಮಾತನಾಡುತ್ತಿದ್ದು, ಮೂವರು ಆತನ ಮಾತನ್ನು ಆಲಿಸುತ್ತಿದ್ದಾರೆ. ಅಬು ಬಕರ್ ಅಲ್-ಬಗ್ದಾದಿ ಅರೇಬಿಕ್ನಲ್ಲಿ ಮಾತನಾಡಿದ್ದು ವಿಡಿಯೋದಲ್ಲಿ ಆತನನ್ನು ಹೊರತುಪಡಿಸಿ ಉಳಿದ ಮೂವರನ್ನು ಬ್ಲರ್ ಮಾಡಲಾಗಿದೆ.
ಐಸಿಸ್ನ ಈ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಖ್ಯಾತ ಪತ್ರಕರ್ತ ಹಸನ್ ಹಸನ್, ಸಿರಿಯಾದಲ್ಲಿ ಐಸಿಸ್ನ ಪ್ರಬಲ ಕೇಂದ್ರ ಬಾಗ್ಹೌಜ್ ಕೈತಪ್ಪಿರುವುದಕ್ಕೆ ಶ್ರೀಲಂಕಾದಲ್ಲಿ ದಾಳಿ ಮಾಡಿ ಪ್ರತೀಕಾರ ತೀರಿಸಿಕೊಂಡಿದ್ದಾಗಿ ಅಬು ಬಕರ್ ಅಲ್-ಬಗ್ದಾದಿ ವಿಡಿಯೋದಲ್ಲಿ ಹೇಳಿದ್ದಾನೆ ಎಂದು ಹಸನ್ ಹಸನ್ ಹೇಳಿದ್ದಾರೆ.
ಆದರೆ ಆತನ ಮಾತಿನ ಬಗ್ಗೆ ಸ್ಪಷ್ಟತೆ ಇಲ್ಲ. ಜೊತೆಗೆ ಈ ವಿಡಿಯೋ ಯಾವಾಗ ಚಿತ್ರೀಕರಿಸಲಾಗಿದೆ ಎನ್ನುವುದು ತಿಳಿದು ಬಂದಿಲ್ಲ. ಹೀಗಾಗಿ ಯಾವುದನ್ನೂ ನಿಖರವಾಗಿ ಹೇಳುವುದು ಅಸಾಧ್ಯ ಎಂದು ಕೆಲವರು ವಾದಿಸಿದ್ದಾರೆ.