ತ್ರಿಶೂರ್(ಕೇರಳ): ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಕುದುರೆ ಏರಿ ಹೊರಟ ಕೇರಳದ ತ್ರಿಶೂರಿನ ಹುಡುಗಿ ತಾನು ಹಾರ್ಸ್ ರೈಡಿಂಗ್ ಕಲಿತ ಕುರಿತು ವಿವರವಾಗಿ ಹೇಳಿದ್ದಾರೆ.
ಅಂದಹಾಗೆ ಈ ಹುಡುಗಿಯ ಹೆಸರು ಕೃಷ್ಣ. ಏಳನೇ ತರಗತಿಯಲ್ಲೇ ಕುದುರೆ ಸವಾರಿ ಕಲಿತ ಈ ಪೋರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಕುದುರೆ ಸವಾರಿ ಮಾಡಿ ಹೊರಟಿದ್ದಳು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಮಹೀಂದ್ರ ಕಂಪನಿಯ ಮುಖ್ಯಸ್ಥ ಆನಂದ್ ಮಹೀಂದ್ರ ಅವರೇ ಈಕೆಯನ್ನು ತನ್ನ 'ಹೀರೊ' ಎಂದು ಹಾಡಿ ಹೊಗಳಿದ್ದರು.
ಕುದುರೆ ಮೇಲೆ ತೆರಳುತ್ತಿರುವ ಕೃಷ್ಣ ಕೃಷ್ಣ ಏಳನೇ ತರಗತಿ ಓದುವಾಗ ಶಾಲೆಯಲ್ಲಿ ವಾರಕ್ಕೆ ಒಂದು ದಿನ ಹಾರ್ಸ್ ರೈಡಿಂಗ್ ತರಬೇತಿ ಇತ್ತಂತೆ. ಆದರೆ, ಹೆಣ್ಣುಮಕ್ಕಳಿಗೆ ಈ ತರಗತಿಯ ಅವಕಾಶ ಇರಲಿಲ್ಲ.
ಒಂದು ಸಾರಿ ಇದರ ಬಗ್ಗೆ ತನ್ನ ಸ್ನೇಹಿತನೊಂದಿಗೆ ಮಾತನಾಡುವಾಗ ಆತ ಜಾನ್ಸಿ ರಾಣಿಯ ಉದಾಹರಣೆ ಕೊಟ್ಟನಂತೆ. ಹೆಣ್ಣುಮಕ್ಕಳು ಕುದುರೆ ಓಡಿಸುವುದು ಕಷ್ಟ. ಜಾನ್ಸಿ ರಾಣಿಯಂತಹವರಿಂದ ಮಾತ್ರ ಅದು ಸಾಧ್ಯ ಎಂದಿದ್ದನಂತೆ.
ಜಾನ್ಸಿಯನ್ನೇ ಮಾಧರಿಯಾಗಿಟ್ಟುಕೊಂಡ ಕೃಷ್ಣ, ತರಬೇತುದಾರರ ಬಳಿ ಬಂದು ಕುದುರೆ ಸವಾರಿ ಹೇಳಿಕೊಡುವಂತೆ ಕೇಳಿದಾಗ ಪೋಷಕರಿಂದ ಒಂದು ಪತ್ರ ಬರೆಸಿಕೊಂಡು ಬರುವಂತೆ ಹೇಳಿದ್ದರು. ಅಪ್ಪ-ಅಮ್ಮ ಇಬ್ಬರೂ ಧೈರ್ಯವಾಗಿ ಕಲಿ ಮಗಳೇ ಎಂದು ಹೇಳಿದ್ದರಂತೆ.
ಕೃಷ್ಣಳ ಆಸಕ್ತಿಯನ್ನು ಗುರುತಿಸಿದ ಆಕೆಯ ತಂದೆ ಆರು ತಿಂಗಳ ಒಂದು ಪುಟ್ಟ ಕುದುರೆಯನ್ನು ಆಕೆಗಾಗಿ ಖರೀದಿಸಿ ತಂದಿದ್ದರು. ಅದೇ ಕುದುರೆ ಈಗ ಕೃಷ್ಣಳಿಗೆ ಒಳ್ಳೆಯ ಸಂಗಾತಿಯಾಗಿದೆ. ವಾರಕ್ಕೆ ಒಮ್ಮೆ ಶಾಲೆಗೆ ಕುದುರೆ ಮೇಲೇರಿ ಹೋಗುವುದು ಕೃಷ್ಣಳಿಗೆ ಇಷ್ಟವಂತೆ.