ಬಂಟ್ವಾಳ :ಭಾನುವಾರದಿಂದ ಸುರಿಯುತ್ತಿರುವ ಮಹಾಮಳೆ ಸೋಮವಾರವೂ ಮುಂದುವರಿದಿದೆ. ಬಂಟ್ವಾಳ ತಾಲೂಕಿನಲ್ಲಿ ವ್ಯಾಪಕ ಹಾನಿಗಳು ಉಂಟಾಗಿದೆ. ಬಂಟ್ವಾಳದಲ್ಲಿ ನೇತ್ರಾವತಿನದಿ5.5 ಮೀಟರ್ ಎತ್ತರಕ್ಕೆ ಹರಿಯುತ್ತಿದ್ದರೆ, ತುಂಬೆ ಡ್ಯಾಂನಲ್ಲಿ 5 ಮೀಟರ್ ಎತ್ತರಕ್ಕೆ ನೀರು ಸಂಗ್ರಹವಾಗಿದೆ. ತುಂಬೆ ಅಣೆಕಟ್ಟಿನಲ್ಲಿ ಒಟ್ಟು 5 ಮೀಟರ್ ನೀರು ಸಂಗ್ರಹವಾಗಿರೋದು ಸೋಮವಾರ ಕಂಡು ಬಂತು.
10 ಮೀಟರ್ ಎತ್ತರದ ತುಂಬೆ ಅಣೆಕಟ್ಟಿನಲ್ಲಿ 7 ಮೀಟರ್ ಎತ್ತರಕ್ಕೆ ನೀರು ನಿಲ್ಲಿಸುವ ಸಾಮರ್ಥ್ಯವಿದ್ದರೂ 6 ಮೀಟರ್ ನೀರು ಸಂಗ್ರಹಕ್ಕೆ ಅನುಮತಿ ಇದೆ. ಇದೀಗ ಸೋಮವಾರ 5 ಮೀಟರ್ ಎತ್ತರದಲ್ಲಿ ನೀರು ಸಂಗ್ರಹವಾಗಿದೆ. 6 ಕ್ರಸ್ಟ್ ಗೇಟ್ಗಳನ್ನು ತೆರೆಯಲಾಗಿದೆ. ಮುಂದೆ ನೀರಿನ ಒಳಹರಿವು ನೋಡಿಕೊಂಡು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರ ಸಂಜೆಯ ಬಳಿಕವೂ ಧಾರಾಕಾರವಾಗಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಪೆರಾಜೆ ಗ್ರಾಮದಲ್ಲಿ ಅವ್ವಮ್ಮ ಎಂಬುವರ ಮನೆಗೆ ಗುಡ್ಡೆಯೊಂದರಿಂದ ನೀರು ಹರಿದು ಬಂದಿದೆ. ಅದೇ ರೀತಿ ಬುಡೋಳಿಯ ನಬಿಸಾ ಎಂಬುವರ ಮನೆಗೂ ನೀರು ನುಗ್ಗಿದೆ. ಬಳಿಕ ಜೆಸಿಬಿಯ ಸಹಾಯದಿಂದ ನೀರು ಬಾರದಂತೆ ತಡೆಯಲಾಯಿತು. ಅನಂತಾಡಿ ಗ್ರಾಮದ ಪೂಂಜಾವುಮನೆ ಎಂಬಲ್ಲಿ ಗಂಗಾಧರ ಪೂಜಾರಿ ಎಂಬುವರ ಮನೆಯ ದನದ ಹಟ್ಟಿಗೆ ಗಾಳಿ ಮಳೆಯಿಂದಾಗಿ ಹಾನಿಯಾಗಿದೆ.
ವಿಟ್ಲ ಕಸಬಾ ಗ್ರಾಮದಲ್ಲಿ ಮನೆಯೊಂದಕ್ಕೆ ಬರೆ ಜರಿದು ಮನೆಯ ಬಚ್ಚಲು ಮನೆಗೆ ಭಾಗಶಃ ಹಾನಿ ಸಂಭವಿಸಿದೆ. ಅನಂತಾಡಿ ಗ್ರಾಮದ ಪೊಯ್ಯೆಮನೆ ಎಂಬಲ್ಲಿ ಮಹಾಬಲ ಮಡಿವಾಳ ಎಂಬುವರ ತೋಟದಲ್ಲಿ ಗಾಳಿ ಮಳೆಯಿಂದಾಗಿ ಅಡಕೆ ಮರಗಳಿಗೆ ಹಾನಿಯಾಗಿದೆ. ತೆಂಕಕಜೆಕಾರು ಗ್ರಾಮದ ಕುರುವರಗೋಳಿಮನೆ ಎಂಬಲ್ಲಿ ವೀರಪ್ಪ ಪೂಜಾರಿ ಅವರ ಕಚ್ಚಾ ಮನೆಯ ಹಿಂಭಾಗದಲ್ಲಿ ತಡೆಗೋಡೆ ಅಡಿಪಾಯ ಕುಸಿದು ಮನೆಯ ಮೇಲೆ ಬಿದ್ದಿದೆ.
ಪರಿಣಾಮ, ಮನೆಯ ಹಿಂಭಾಗ ಸಂಪೂರ್ಣ ಹಾನಿಯಾಗಿದೆ. ಸಜಿಪಮುನ್ನೂರು ಗ್ರಾಮದ ಅಬ್ದುಲ್ ಹಮೀದ್ ಅವರ ಕಚ್ಚಾ ಮನೆ ಮಳೆಗೆ ಹಾನಿಯಾಗಿದೆ. ಪೆರಾಜೆಯ ಅಬ್ದುಲ್ ಹಕೀಂ ಅವರ ಕಂಪೌಂಡ್ಗೆ ಸಹ ಹಾನಿಯಾಗಿದೆ. ಇನ್ನು,ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಸೋಮವಾರ ಬೆಳಗ್ಗೆ 5.5 ಮೀಟರ್ ಎತ್ತರದಲ್ಲಿ ಹರಿಯುತ್ತಿತ್ತು.