ಇಸ್ಲಾಮಾಬಾದ್: ರಂಜಾನ್ ಹಬ್ಬದ ಪ್ರಯುಕ್ತಶನಿವಾರ ಸಂಜೆ ಪಾಕಿಸ್ತಾನದಲ್ಲಿರುವ ಭಾರತೀಯ ಹೈಕಮೀಷನರ್ ಆಯೋಜನೆ ಮಾಡಿದ್ದ ಇಫ್ತಾರ್ ಕೂಟವನ್ನು ಕೊನೆ ಕ್ಷಣದಲ್ಲಿ ರದ್ದುಗೊಳಿಸಲಾಗಿದೆ.
ಪಾಕಿಸ್ತಾನ ಸೇನಾ ಪಡೆ ಭಾರತೀಯ ರಾಯಭಾರ ಅಧಿಕಾರಿಗಳನ್ನು ಗೇಟ್ ಬಳಿಯೇ ತಡೆದು ಇಫ್ತಾರ್ ಕೂಟಕ್ಕೆ ತೆರಳದಂತೆ ತಡೆಯೊಡ್ಡಿದ್ದಾರೆ. ಇದಲ್ಲದೇ ಪಾಕಿಸ್ತಾನದ ಕೆಲ ಅಧಿಕಾರಿಗಳಿಗೂ ಭದ್ರತಾ ಸಿಬ್ಬಂದಿ ಪ್ರವೇಶ ನಿರಾಕರಿಸಿದ್ದಾರೆ.
ಭಾರತೀಯ ಹೈಕಮೀಷನರ್ ಅಜಯ್ ಬಿಸಾರಿಯಾ ಆಯೋಜನೆ ಮಾಡಿದ್ದ ಈ ಇಫ್ತಾರ್ ಕೂಟಕ್ಕೆ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಅಧ್ಯಕ್ಷ ಅರಿಫ್ ಅಲ್ವಿ ಸೇರಿದಂತೆ ಹಲವು ಗಣ್ಯರನ್ನು ಆಹ್ವಾನಿಸಲಾಗಿತ್ತು. ಪಾಕ್ ಪ್ರಧಾನಿ ಹಾಗೂ ಅಧ್ಯಕ್ಷರು ಇಫ್ತಾರ್ ಕೂಟದಲ್ಲಿ ಭಾಗವಹಿಸಿರಲಿಲ್ಲ.
ಇಫ್ತಾರ್ ಕೂಟದಲ್ಲಿ ಭಾಗವಹಿಸಲು ನಾನು ಬಂದಿದ್ದೆ. ಹೊಟೇಲ್ನಲ್ಲಿ ಬ್ಯಾರಿಕೇಡ್ ಹಾಕಿರುವುದನ್ನು ಗಮನಿಸಿದೆ. ಇಫ್ತಾರ್ ಕೂಟ ರದ್ದುಗೊಂಡಿದೆ ಎಂದು ಮಾಹಿತಿ ನೀಡಿದರು. ಮತ್ತೊಂದು ಗೇಟ್ ಮೂಲಕ ಒಳಪ್ರವೇಶಿಸಲು ಹೇಳಿದರು. ಆ ಗೇಟ್ ಬಳಿ ಹೋದಾಗ ಅದು ಮುಚ್ಚಲ್ಪಟ್ಟಿತ್ತು. ಏನಾಗುತ್ತಿದೆ ಎಂದು ನನಗೆ ತಿಳಿಯಲಿಲ್ಲ ಎಂದು ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ನಾಯಕ ಫರ್ಹತುಲ್ಲಾ ಬಾಬರ್ ಟ್ವೀಟ್ ಮಾಡಿದ್ದಾರೆ.
ಭಾರತೀಯ ರಾಯಭಾರ ಅಧಿಕಾರಿಗಳಿಗೆ ಪ್ರವೇಶ ನಿರಾಕರಿಸಿದ್ದಲ್ಲದೆ ಹೊಟೇಲ್ ಹೊರಭಾಗದಲ್ಲಿ ಹಲ್ಲೆ ಮಾಡಲಾಗಿದೆ. ಭಾರತೀಯ ಅಧಿಕಾರಿಗಳಿಗೆ ಬೆದರಿಕೆಯೊಡ್ಡಿ ಹೊಟೇಲ್ನಿಂದ ಹೊರ ಕಳುಹಿಸಲಾಯಿತು ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.