ಕೋಲ್ಕತ್ತಾ:ಎರಡು ತಿಂಗಳ ನಂತರ ಪಶ್ಚಿಮ ಬಂಗಾಳದ ದ್ವಿಪಕ್ಷೀಯ ವ್ಯಾಪಾರವು ನೆರೆಯ ಬಾಂಗ್ಲಾದೇಶದೊಂದಿಗೆ ಪುನಾರಂಭಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೆಟ್ರಾಪೋಲ್ ಐಸಿಪಿ ಮೂಲಕ ದ್ವಿಪಕ್ಷೀಯ ವ್ಯಾಪಾರವನ್ನು ಪುನಾರಂಭಿಸಲು ನಾವು ಅವಕಾಶ ನೀಡುತ್ತಿದ್ದು, ಅಗತ್ಯವಿರುವ ಎಲ್ಲ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗುವುದು ಎಂದರು.
ಸ್ಥಳೀಯ 100 ಟ್ರಕ್ ಚಾಲಕರಿಗೆ ಬಾಂಗ್ಲಾದೇಶ ಚೆಕ್ಪೋಸ್ಟ್ ಪ್ರದೇಶದ 500 ಮೀಟರ್ ವರೆಗೆ ಹೋಗಲು ಮಾತ್ರ ಅನುಮತಿ ಕೊಡಲಾಗಿದೆ. ಅಲ್ಲಿ ಸರಕುಗಳನ್ನು ಇಳಿಸಿ ಕೂಡಲೇ ಹಿಂತಿರುಗುವಂತೆ ಸೂಚನೆ ನೀಡಲಾಗಿದೆ.
ಅಲ್ಲದೇ ಕಡ್ಡಾಯವಾಗಿ ಚಾಲಕರು ಪಿಪಿಇ ಕಿಟ್ ಧರಿಸಬೇಕು. ಯಾವುದೇ ಕಾರಣಕ್ಕೂ ವಾಹನಗಳಿಂದ ಇಳಿಯಬಾರದು. ಇನ್ನು ಸರಕುಗಳನ್ನು ಇಳಿಸಿದ ಬಳಿಕ ಟ್ರಕ್ ಗಳನ್ನು ಸ್ವಚ್ಛಗೊಳಿಸಲು ತಿಳಿಸಲಾಗಿದೆ. ದಿನದ 12 ಗಂಟೆಗಳ ಕಾಲ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಪೆಟ್ರಾಪೋಲ್ ಚೆಕ್ ಪೋಸ್ಟ್ ಮೂಲಕ ಸರಕುಗಳ ರಫ್ತು ವ್ಯಾಪಾರ ಪುನಾರಂಭಗೊಂಡಿದೆ. ಆಡಳಿತ ನೀಡಿದ ಸೂಚನೆಗಳನ್ನು ಅನುಸರಿಸಲು ನಾವು ಒಪ್ಪಿದ್ದೇವೆ ಎಂದು ರಫ್ತುದಾರರ ಸಂಸ್ಥೆಯ ಎಫ್‌ಐಇಒ ಅಧಿಕಾರಿ ತಿಳಿಸಿದರು.
ಇಂಡೋ-ಬಾಂಗ್ಲಾ ಗಡಿಯಲ್ಲಿರುವ ಅತಿದೊಡ್ಡ ಸೌಲಭ್ಯವಾದ ಈ ಭೂ ಬಂದರಿನ ದ್ವಿಪಕ್ಷೀಯ ವ್ಯಾಪಾರವನ್ನು ಮೇ. 2 ರಂದು ನಿಲ್ಲಿಸಲಾಗಿತ್ತು. ವ್ಯಾಪಾರ ಆರಂಭಿಸಿದರೆ ಟ್ರಕ್ ಚಾಲಕರು ಹಾಗೂ ಕಾರ್ಮಿಕರಿಂದ ಕೊರೊನಾ ಹರಡುವ ಸಾಧ್ಯತೆ ಇದೆ ಎಂದು ಅಲ್ಲಿನ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು.