ತುಮಕೂರು:ನಗರದಲ್ಲಿ ಮೊಹಮದ್ ಅಸ್ಲಾಂ ಎಂಬಾತ ಈಜಿಮೈಂಡ್ ಇಂಡಿಯಾ ಪ್ರೈ. ಲಿ ಸಂಸ್ಥೆಯ ಹೆಸರಿನಲ್ಲಿ ಹೆಚ್ಚಿನ ಬಡ್ಡಿಯ ಆಮಿಷವೊಡ್ಡಿ ಸಾರ್ವಜನಿಕರಿಂದ ಕೋಟ್ಯಾಂತರ ರೂಪಾಯಿ ಸಂಗ್ರಹಿಸಿಕೊಂಡು ಪರಾರಿಯಾಗಿದ್ದಾನೆ ಎಂದು ಹೂಡಿಕೆದಾರರು ಆರೋಪಿಸಿದ್ದಾರೆ.
2017 ರಿಂದ 2018ರ ಡಿಸೆಂಬರ್ವರೆಗೆ ಸಾರ್ವಜನಿಕರಿಗೆ ಹೂಡಿಕೆಗೆ ತಕ್ಕಂತೆ ಬಡ್ಡಿ ಹಣ ನೀಡಿ ಗ್ರಾಹಕರ ವಿಶ್ವಾಸ ಗಳಿಸಿದ್ದನು. ಅಲ್ಲದೆ ಏಕಾಏಕಿ 1 ಲಕ್ಷ ರೂ ಹೂಡಿಕೆ ಮಾಡಿದರೆ 4 ತಿಂಗಳು ಹತ್ತು ದಿನದ ಅವಧಿಗೆ 10 ಲಕ್ಷ ರೂ. ನೀಡುವುದಾಗಿ ಹೇಳಿ ಗ್ರಾಹಕರಿಂದ ಅಪಾರ ಪ್ರಮಾಣದ ಹಣ ಸಂಗ್ರಹಿಸಿದ್ದ. ಸಂಸ್ಥೆ ಪ್ರಾರಂಭವಾದಾಗಿನಿಂದ 2018ರ ಡಿಸೆಂಬರ್ ತಿಂಗಳವರೆಗೆ ತನ್ನ ಗ್ರಾಹಕರಿಗೆ ಹೆಚ್ಚಿನ ಬಡ್ಡಿ ನೀಡಿ ನಂಬಿಕೆ ಉಳಿಸಿಕೊಂಡಿದೆ. ಅದೇ ರೀತಿ ಅಪಾರ ಪ್ರಮಾಣದ ಡೆಪಾಸಿಟ್ ಹಣವನ್ನು ಕೂಡ ಸಂಗ್ರಹಿಸಲಾಗಿತ್ತು ಎಂಬ ಮಾಹಿತಿ ಹೂಡಿಕೆದಾರರಿಂದ ತಿಳಿದು ಬಂದಿದೆ.
ಈ ಸಂಸ್ಥೆಯಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಅಲ್ಪಸಂಖ್ಯಾತ ಸಮುದಾಯದವರಿಂದಲೇ ಕೋಟ್ಯಂತರ ರೂಪಾಯಿ ಹಣವನ್ನು ಹೂಡಿಕೆ ಮಾಡಿಸಿಕೊಳ್ಳಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಮೊದಲ ಯೋಜನೆ ಜನರಲ್ ಪ್ಲಾನ್ ತಿಂಗಳ ಯೋಜನೆಯಲ್ಲಿ ಗ್ರಾಹಕ ಒಮ್ಮೆ 50 ಸಾವಿರ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಮೂರು ಸಾವಿರ ಮತ್ತು 1 ಲಕ್ಷ ಹೂಡಿಕೆ ಮಾಡಿದರೆ 6000, 2 ಲಕ್ಷಕ್ಕೆ ಹತ್ತರಿಂದ ಹನ್ನೆರಡು ಸಾವಿರ ರೂಪಾಯಿ, 5 ಲಕ್ಷಕ್ಕೆ 25ರಿಂದ 30 ಸಾವಿರ ರೂಪಾಯಿ ಬಡ್ಡಿ ನೀಡುವುದಾಗಿ ಒಡಂಬಡಿಕೆ ಮಾಡಿಕೊಂಡಿದ್ದ.