ಬೆಳಗಾವಿ: ಜನರ ಹಿತದೃಷ್ಟಿಯಿಂದ ಬಿಮ್ಸ್ ಆಸ್ಪತ್ರೆ ಜನತೆಯ ಕಳಕಳಿಯೊಂದಿಗೆ ಕೆಲಸ ಮಾಡುವ ಮೂಲಕ ಹಿಂದೆ ಆಗಿರುವ ಲೋಪಗಳನ್ನು ಮರುಕಳಿಸದಂತೆ ಪುನರಾವರ್ತನೆ ಆಗದಂತೆ ನೋಡಿಕೊಳ್ಳಬೇಕು ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಬಿಮ್ಸ್ ಆಸ್ಪತ್ರೆ ಜನಪರವಾಗಿ ಕೆಲಸ ಮಾಡಬೇಕು. ಹಿಂದೆ ಆಗಿರುವ ಲೋಪಗಳನ್ನು ತಿದ್ದಿಕೊಳ್ಳುವಂತೆ ಸಲಹೆ ನೀಡಲಾಗಿದೆ. ಬಿಮ್ಸ್ ನಿರ್ದೇಶಕರು ಎರಡು ದಿನಕ್ಕೊಂದು ಬಾರಿ ಪಿಪಿಇ ಕಿಟ್ ಹಾಕಿಕೊಂಡು ಆಸ್ಪತ್ರೆ ಸ್ಥಿತಿಗತಿಗಳು ಹಾಗೂ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡಬೇಕು ಎಂದು ಸೂಚಿಸಿದರು.
ಮುಂಬರುವ ದಿನಗಳಲ್ಲಿ ಬಿಮ್ಸ್ ಆಸ್ಪತ್ರೆ ಒಳ್ಳೆ ಕೆಲಸ ಮಾಡುವ ಮೂಲಕ ಜನರ ಪ್ರೀತಿ ವಿಶ್ವಾಸ ಗಳಿಸಲಿದೆ. ಒಂದು ವೇಳೆ ಆಗದಿದ್ರೆ ನಿಯಂತ್ರಣ ಕಮಿಟಿ ಅಧ್ಯಕ್ಷರು ನಾನು ಸೇರಿ ತೀರ್ಮಾನ ಮಾಡುತ್ತೇವೆ. ಬಿಮ್ಸ್ ನಿರ್ದೇಶಕರಿಗೆ ಕೈ ಮುಗಿದಿರುವುದು ಅವರಿಗೆ ಸರೆಂಡರ್ ಆದಂಗಲ್ಲ. ಹೀಗಾಗಿ ಜನರ ಜೀವದ ಜೊತೆಗೆ ಚೆಲ್ಲಾಟ ಆಡಬಾರದು ಎಂಬ ಕಾರಣಕ್ಕೆ ಕೈ ಮುಗಿದಿರುವೆ. ಇದು ಮೊದಲನೇ ಹಂತ, ಎರಡನೇ ಹಂತದಲ್ಲಿ ನಮ್ಮ ಭಾಷೆ ಹೇಗೆ ಬಳಸಬೇಕೊ ಹಾಗೇ ಬಳಸುತ್ತೇನೆ ಎಂದರು.
ಜಿಲ್ಲೆಯಲ್ಲಿ ಸಾಕಷ್ಟು ಬೆಡ್ಗಳನ್ನು ಹಾಕಬೇಕಿದೆ. ತಾಲೂಕಾ ಹಾಗೂ ಜಿಲ್ಲಾ ಮಟ್ಟದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಸಮುದಾಯ ಭವನ ಎಲ್ಲವನ್ನೂ ತೆಗೆದುಕೊಳ್ಳುತ್ತೇವೆ. ಬೆಡ್ ಸಂಖ್ಯೆ, ವೈದ್ಯರ ಸಂಖ್ಯೆ ಹೆಚ್ಚು ಮಾಡುತ್ತೇವೆ. ಔಷಧಿ ಉಪಚಾರದ ಸಂಖ್ಯೆ ಹೆಚ್ಚು ತೆರೆಯಲು ಮತ್ತು ಸರಬರಾಜು ಮಾಡಲು ಪ್ರಯತ್ನ ಮಾಡುತ್ತೇವೆ ಎಂದರು.