ನವದೆಹಲಿ: ಡೆಲ್ಲಿ ಕ್ಯಾಪಿಟಲ್ ಬೌಲಿಂಗ್ ದಾಳಿಗೆ ತತ್ತರಿಸಿದ ರಾಜಸ್ಥಾನ ರಾಯಲ್ಸ್ ರಿಯಾನ್ ಪರಾಗ್ ಅರ್ಧಶತಕದ ನೆರವಿನಿಂದ ಕೇವಲ 116 ರನ್ಗಳ ಟಾರ್ಗೆಟ್ ನೀಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಆರ್ಆರ್ ಪವರ್ ಪ್ಲೇನಲ್ಲೇ ತಂಡದ ಪ್ರಮುಖ ಆಟಗಾರರಾದ ರಹಾನೆ(2), ಲೆವಿಂಗ್ಸ್ಟೋನ್(14) ಹಾಗೂ ಲಾಮ್ರೋರ್(8) ವಿಕೆಟ್ ಪಡೆದು ಇಶಾಂತ್ ಶರ್ಮಾ ಆಘಾತ ನೀಡಿದರು. ಸಂಜು ಸಾಮ್ಸನ್(5) ಇಲ್ಲದ ರನ್ ಕದಿಯಲು ಹೋಗಿ ರನ್ಔಟ್ ಆಗುವ ಮೂಲಕ ರಾಜಸ್ಥಾನದ ಪ್ಲೇ ಆಫ್ ಕನಸನ್ನು ನುಚ್ಚುನೂರು ಮಾಡಿದರು.
ಈ ಹಂತದಲ್ಲಿ ಒಂದಾದ ಗೋಪಾಲ್(12) ಹಾಗೂ ರಿಯಾನ್ ಪರಾಗ್ 5ನೇ ವಿಕೆಟ್ಗೆ 27 ರನ್ಗಳ ಜೊತೆಯಾಟ ನೀಡಿದರು. ಗೋಪಾಲ್ ಮಿಶ್ರಾ ಬೌಲಿಂಗ್ನಲ್ಲಿ ಔಟಾಗುತ್ತಿದ್ದಂತೆ ಮತ್ತೆ ಪೆವಿಲಿಯನ್ ಪರೇಡ್ ನಡೆಸಿದ ಆರ್ಆರ್ ತಂಡದ ಸ್ಟುವರ್ಟ್ ಬಿನ್ನಿ(0), ಕೆ. ಗೌತಮ್ (6), ಇಶ್ ಸೋಧಿ (6) ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಏಕಾಂಗಿ ಹೋರಾಟ ನಡೆಸಿದ ರಿಯಾನ್ ಪರಾಗ್ 49 ಎಸೆತಗಳಲ್ಲಿ 50 ರನ್ ಗಳಿಸಿ ತಂಡದ ಮೊತ್ತ 100 ರನ್ ಗಡಿ ದಾಟುವಂತೆ ಮಾಡಿದರು.
ಡೆಲ್ಲಿ ಪರ ಮಾರಕ ದಾಳಿ ನಡೆಸಿದ ಇಶಾಂತ್ ಶರ್ಮಾ 3, ಅಮಿತ್ ಮಿಶ್ರಾ 3, ಟ್ರೆಂಟ್ ಬೌಲ್ಟ್ 2 ವಿಕೆಟ್ ಪಡೆದರು.