ಕರ್ನಾಟಕ

karnataka

ETV Bharat / briefs

ಜುಲೈ 12ರೊಳಗೆ ಜೋತು ಬಿದ್ದಿರುವ ಕೇಬಲ್ ತೆರವು ಮಾಡಿ : ಬಿಬಿಎಂಪಿಗೆ ಹೈಕೋರ್ಟ್ ತರಾಟೆ - bangalore latest news

ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗುವಂತೆ ಪಾದಚಾರಿ ಮಾರ್ಗಗಳಲ್ಲಿ ಜೋತು ಬಿದ್ದಿರುವ ಕೇಬಲ್ ವೈರ್​ಗಳನ್ನು ತೆರವುಗೊಳಿಸಲು ಪಾಲಿಕೆಗೆ ಆದೇಶಿಸಬೇಕು ಎಂದು ಕೋರಿ ವಕೀಲ ಎನ್ ಪಿ ಅಮೃತೇಶ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು..

 Clear the cable by July 12: High Court notice to BBMP
Clear the cable by July 12: High Court notice to BBMP

By

Published : Jun 9, 2021, 8:17 PM IST

ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ಜುಲೈ 12ರೊಳಗೆ ಅಡ್ಡಾದಿಡ್ಡಿ ಜೋತು ಬಿದ್ದಿರುವ ಕೇಬಲ್‌ಗಳನ್ನು ತೆರವು ಮಾಡಿ ವರದಿ ಸಲ್ಲಿಸಬೇಕು ಎಂದು ತಾಕೀತು ಮಾಡಿದೆ. ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗುವಂತೆ ಪಾದಚಾರಿ ಮಾರ್ಗಗಳಲ್ಲಿ ಜೋತು ಬಿದ್ದಿರುವ ಕೇಬಲ್ ವೈರ್​ಗಳನ್ನು ತೆರವುಗೊಳಿಸಲು ಪಾಲಿಕೆಗೆ ಆದೇಶಿಸಬೇಕು ಎಂದು ಕೋರಿ ವಕೀಲ ಎನ್ ಪಿ ಅಮೃತೇಶ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಜಾನುವಾರು ಸಂರಕ್ಷಣೆಗಾಗಿ ಗೋಹತ್ಯೆ ನಿಷೇಧ ಕಾಯ್ದೆ ತಂದಿದ್ದೇವೆ: ಆಕ್ಷೇಪಣೆ ಸಲ್ಲಿಸಿದ ಸರ್ಕಾರ

ಈ ವೇಳೆ ಪಾಲಿಕೆ ಪರ ವಕೀಲರನ್ನು ಪ್ರಶ್ನಿಸಿದ ಪೀಠ, ಕೇಬಲ್​ಗಳನ್ನು ತೆರವುಗೊಳಿಸುವ ಕುರಿತು ಯಾವೆಲ್ಲ ಕ್ರಮಕೈಗೊಳ್ಳಲಾಗಿದೆ ಎಂದು ಕೇಳಿತು. ಪಾಲಿಕೆ ವಕೀಲರು ಪೀಠಕ್ಕೆ ಉತ್ತರಿಸಿ, ಕ್ರಮಕೈಗೊಳ್ಳಲಾಗುತ್ತಿದೆ, ಬಹುತೇಕ ಕಡೆ ಕೇಬಲ್‌ಗಳನ್ನು ತೆರವುಗೊಳಿಸಲಾಗುತ್ತಿದೆ ಎಂದರು. ಸಮರ್ಪಕ ಉತ್ತರ ಸಿಗದ ಹಿನ್ನೆಲೆ ಪಾಲಿಕೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಪಾದಚಾರಿ ಮಾರ್ಗಗಳು ಮತ್ತು ಮರಗಿಡಗಳ ಮೇಲೆ ಈಗಲೂ ಕೇಬಲ್‌ಗಳು ನೇತಾಡುತ್ತಿವೆ.

ಪಾಲಿಕೆ ಅಧಿಕಾರಿಗಳು ಸ್ವಲ್ಪ ಕಣ್ಣು ಬಿಟ್ಟು ನೋಡಿದರೆ ಎಲ್ಲವೂ ಕಾಣುತ್ತವೆ. ನಿಮ್ಮ ಅಧಿಕಾರಿಗಳಿಗೆ ಸ್ವಲ್ಪ ಕಚೇರಿ ಬಿಟ್ಟು ನಗರದಲ್ಲಿ ಓಡಾಡಲು ಹೇಳಿ. ಆಗ ಎಲ್ಲೆಲ್ಲಿ ಕೇಬಲ್​ನಿಂದ ಸಮಸ್ಯೆಯಾಗುತ್ತಿದೆ ಎಂಬುದು ತಿಳಿಯುತ್ತದೆ. ನಾವು ಗಮನಿಸಿದಂತೆ ಎಲ್ಲಿಯೂ ಕೇಬಲ್ ತೆರವಾಗಿಲ್ಲ, ಎಲ್ಲ ಕಡೆಯೂ ಮುಂಚಿನಂತೆಯೇ ಕೇಬಲ್ ನೇತಾಡುತ್ತಿವೆ, ಅವುಗಳಿಂದ ಜನಸಾಮಾನ್ಯರಿಗೆ ಎಷ್ಟು ತೊಂದರೆ ಆಗುತ್ತಿದೆ ಎಂಬುದು ತಿಳಿದಿದೆಯೇ ಎಂದು ತರಾಟೆಗೆ ತೆಗೆದುಕೊಂಡಿತು.

ಅರ್ಜಿದಾರರರು ಪೀಠಕ್ಕೆ ಮಾಹಿತಿ ನೀಡಿ, ನಗರದ ಮಲ್ಲೇಶ್ವರಂ, ಶೇಷಾದ್ರಿಪುರಂ, ಕುಮಾರಪಾರ್ಕ್ ಸೇರಿದಂತೆ ಎಲ್ಲಿಯೂ ಕೇಬಲ್‌ಗಳನ್ನು ತೆರವು ಮಾಡಿಲ್ಲ ಎಂದು ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಅರ್ಜಿದಾರರು ಫೋಟೋ ಸಹಿತ ಹೇಳಿದ್ದರೂ ಪಾಲಿಕೆಗೆ ಕಾಣುತ್ತಿಲ್ಲ. ಹೀಗಾಗಿ, ನ್ಯಾಯಾಲಯ ಈ ಹಿಂದಿನ ವಿಚಾರಣೆ ವೇಳೆ ನಿರ್ದೇಶಿಸಿದ್ದಂತೆ ಪಾಲಿಕೆ ಜುಲೈ 12ರೊಳಗೆ ಬೀದಿಬದಿ, ಪಾದಚಾರಿ ಮಾರ್ಗಗಳಲ್ಲಿನ ಮತ್ತು ಮರಗಿಡಗಳ ಮೇಲಿನ ಕೇಬಲ್‌ಗಳನ್ನು ತೆರವುಗೊಳಿಸಬೇಕು. ಆ ಕುರಿತ ವರದಿಯನ್ನು ಮುಂದಿನ ವಿಚಾರಣೆಗೆ ಮುನ್ನ ಸಲ್ಲಿಸಬೇಕು ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿತು.

ABOUT THE AUTHOR

...view details