ಹನ್ನೆರಡನೆಯ ಶತಮಾನ ವಿಶ್ವದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹುದು. ಕರ್ನಾಟಕದಲ್ಲಿ ಬಸವಾದಿ ಶರಣರ ದಿವ್ಯ ಮಾರ್ಗದರ್ಶನದಲ್ಲಿ ಮಾನವ ಕಲ್ಯಾಣ ದಿಸೆಯಲ್ಲಿ ನಡೆದ ಸಮರ, ಕ್ರಾಂತಿ ವಿಶ್ವದ ಯಾವುದೇ ಭಾಗದಲ್ಲಿ ಒಮ್ಮೆಲೇ ನಡೆದ ನಿದರ್ಶನಗಳೇ ಇಲ್ಲ. ವಿಶ್ವದಲ್ಲಿ ಕಾಲಕಾಲಕ್ಕೆ ಅನೇಕ ರೀತಿಯ ಕ್ರಾಂತಿಗಳಾಗಿವೆ. ಆ ಯಾವ ಕ್ರಾಂತಿಯೂ ಈ ಶರಣರು ಮಾಡಿದಂತಹ ಸಮಗ್ರ ಕ್ರಾಂತಿಯನ್ನು ಹೋಲಲು ಸಾಧ್ಯವಿಲ್ಲ. ಇದಕ್ಕೆ ಮೂಲ ಕಾರಣ ಮಾನವ ಸಮುದಾಯದ ಎಲ್ಲಾ ಕ್ಷೇತ್ರಗಳ ಸದಾಶಯಗಳಿಗೆ ಸ್ಪಂದಿಸುವಂತಹ ಕ್ರಾಂತಿಗೆ ನಾಂದಿ ಹಾಡಿದವರು ಬಸವಾದಿ ಶರಣರು.
ಧಾರ್ಮಿಕ, ಆರ್ಥಿಕ, ಸಾಹಿತ್ಯಿಕ, ನೈತಿಕ ಹಾಗೂ ಸಾಮಾಜಿಕ ಹೀಗೆ ಎಲ್ಲ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅವರ ಕ್ರಾಂತಿಕಾರರ ವಿಚಾರಧಾರೆ ಅತ್ಯಂತ ಪ್ರಖರವಾಗಿ ಮಾನವೀಯ ನೆಲೆಯಲ್ಲಿ ಹರಿದುಬಂದದ್ದು ಒಂದು ವಿಸ್ಮಯವೇ ಸರಿ. ಇದಕ್ಕೆ ಮೂಲ ಪ್ರೇರಣೆಯಾದದ್ದು ಬಸವಾದಿ ಶರಣರ ದಾರ್ಶನಿಕ ಚಿಂತನೆಗಳು. ಅವರು ಪ್ರತಿಪಾದಿಸಿದ ಮಾನವೀಯ ಜೀವನ ಮೌಲ್ಯಗಳು. ವಿಶಿಷ್ಟವಾದ ವೈಚಾರಿಕ ನೆಲೆಯಲ್ಲಿ ಮಾನವ ಬದುಕನ್ನು ಕಂಡಂತಹ ಅವರ ವಿಶಿಷ್ಟವಾದ ಧೋರಣೆಗಳು, ಸಮಗ್ರ ಕ್ರಾಂತಿಯ ಮೂಲಕ ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ ಅವರ ಉದಾತ್ತ ಜೀವನ ಸಿದ್ಧಾಂತಗಳು.
ಬಸವಣ್ಣನವರ ಮಹಾನ್ ದಾರ್ಶನಿಕ ಮಾರ್ಗದರ್ಶನದಲ್ಲಿ ನಾಡಿನ, ರಾಷ್ಟ್ರದ ಮೂಲೆ ಮೂಲೆಗಳಿಂದಲೂ ಶರಣ ತತ್ವಗಳಿಂದ ಆಕರ್ಷಿತರಾಗಿ ನೂರಾರು ಶರಣರು ಏಕಕಾಲಕ್ಕೆ ಬಂದದ್ದು ಒಂದು ಐತಿಹಾಸಿಕ ಘಟನೆ. ಶರಣರ ಆಗಮನದಿಂದ ಕಲ್ಯಾಣದಲ್ಲಿ ನಡೆದಂತಹ ಒಂದು ವಿನೂತನವಾದ ಸಮರ ಕ್ರಾಂತಿಗೆ ಸ್ಪೂರ್ತಿಯ ಸೆಲೆಯಾಗಿದ್ದ ಬಸವಣ್ಣನವರ ದರ್ಶನದಿಂದ ನನ್ನ ಬದುಕು ಸಾರ್ಥಕವಾಯಿತು ಎನ್ನುವ ಅಲ್ಲಮಪ್ರಭುಗಳ ಈ ವಚನವು ಬಸವಣ್ಣನವರ ದಿವ್ಯ ವ್ಯಕ್ತಿತ್ವವಕ್ಕೆ ಹಿಡಿದ ಕನ್ನಡಿಯಂತಿದೆ.
"ಕಲ್ಯಾಣವೆಂಬ ಪ್ರಣತಿಯಲ್ಲಿ, ಭಕ್ತಿರಸವೆಂಬ ತೈಲವನೆರೆದು ಆಚಾರವೆಂಬ ಬತ್ತಿಯಲ್ಲಿ ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು ತೊಳಗಿ ಬೆಳಗುತ್ತಿದ್ದಿತ್ತಯ್ಯಾ ಶಿವನ ಪ್ರಕಾಶ ಆ ಬೆಳಗಿನೊಳಗೆ ಒಪ್ಪುತ್ತಿದ್ದರಯ್ಯ ಅಸಂಖ್ಯಾತ ಭಕ್ತಗಣಂಗಳು ಶಿವಭಕ್ತರಿದ್ದ ಕ್ಷೇತ್ರ ಅವಿಮುಕ್ತ ಕ್ಷೇತ್ರವೆಂಬುದು ಹುಸಿಯೆ? ಶಿವಭಕ್ತರಿದ್ದ ದೇಶ ಪಾವನವೆಂಬುದು ಹುಸಿಯೆ? ಗುಹೇಶ್ವರಲಿಂಗದಲ್ಲಿ ಎನ್ನ ಪರಮಾರಾಧ್ಯ ಸಂಗನ ಬಸವಣ್ಣನ ಕಂಡು ಬದುಕಿದೆನು ಕಾಣಾ, ಸಿದ್ದರಾಮಯ್ಯ"
ಅನುಭವ ಮಂಟಪ:
ಬಸವಾದಿ ಶರಣರು ತಮ್ಮ ಎಲ್ಲಾ ಶರಣ ಸಮೂಹದೊಂದಿಗೆ ಅನುಭಾವದ ಬಗ್ಗೆ ಚಿಂತನೆ, ವಿಚಾರ ವಿನಿಮಯ ಮತ್ತು ಸಂವಾದಕ್ಕಾಗಿ ನಿರ್ಮಿಸಿಕೊಂಡಿದ್ದ ಒಂದು ಚಿಂತನೆಯ ವೇದಿಕೆಯೇ ಅನುಭವ ಮಂಟಪ, ಇದೊಂದು ಜ್ಞಾನದ ಪೀಠ. ಕಾಯಕ ಭೇದವಿಲ್ಲದೆ, ಲಿಂಗಭೇದವಿಲ್ಲದೆ, ಜಾತ್ಯತೀತ ನೆಲೆಯಲ್ಲಿ ಶರಣರೆಲ್ಲರೂ ಕೂಡಿ ತಮ್ಮ ತಮ್ಮ ದಿನ ನಿತ್ಯದ ಕಾಯಕ ಮತ್ತು ಬದುಕಿನ ಅನುಭಾವದ ಸಂವೇದನೆಯ ಹಿನ್ನಲೆಯಲ್ಲಿ ನಿರ್ಭೀತವಾಗಿ ನಡೆಸುತ್ತಿದ್ದ ಶರಣರ ಆಧ್ಯಾತ್ಮಿಕ ಚಿಂತನೆಗಳ ಒಂದು ಪ್ರಜಾಸತ್ತಾತ್ಮಕ ಕೇಂದ್ರವೇ ಅನುಭವ ಮಂಟಪ. ಈ ಅನುಭವ ಮಂಟಪವೇ ವಿಶ್ವದ ಮೊದಲ ಪಾರ್ಲಿಮೆಂಟ್ ಎಂದು ವಿಮರ್ಶಕರಿಂದ ಬಣ್ಣಿಸಲಾಗಿದೆ.
ಜೀವನ ಸಂವಿಧಾನ:
ಬಸವಣ್ಣನವರ ಕ್ರಾಂತಿಗೆ ಮೂಲ ಆಧಾರವಾದಂತಹ ಈ ವಚನ ಇಡೀ ವಿಶ್ವ ಸಮುದಾಯಕ್ಕೆ ನೀಡಿದಂತಹ ಒಂದು ಸಾಮಾಜಿಕ ನೀತಿ ಸಂಹಿತೆ. ಜಗತ್ತಿನ ಮನುಕುಲಕ್ಕೆ ನೀಡಿದಂತಹ ಜೀವನ ಸಂವಿಧಾನ, ಮಾನವ ಸಂವಿಧಾನ.
“ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ,
ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ
ತನ್ನ ಬಣ್ಣಿಸಬೇಡ, ಇದಿರಹಳಿಯಲು ಬೇಡ
ಇದೇ ಅಂತರಂಗ ಶುದ್ದಿ, ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ”
ಜಾತ್ಯಾತೀತ ಸಮಾಜದ ಕಲ್ಪನೆ:
ಜಾತಿ ಜಾತಿಗಳ ಧರ್ಮ-ಧರ್ಮಗಳ ಹೆಸರಿನಲ್ಲಿ ನಡೆಯುತ್ತಿದ್ದ ಮಾನವ ಸಂಘರ್ಷವನ್ನು ಕುರಿತು ನೊಂದು ನುಡಿದ ಈ ವಚನ ಇಡೀ ವಿಶ್ವಕ್ಕೆ ನೀಡಿದ ಒಂದು ದಿವ್ಯ ಸಂದೇಶವಾಗಿದೆ.
“ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ
ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ
ಕೂಡಲಸಂಗಮದೇವಾ
ನಿಮ್ಮ ಮನೆಯ ಮಗನೆಂದೆನಿಸಯ್ಯಾ”
ಮನುಷ್ಯನಾಗಿ ಹುಟ್ಟಿದ ಮೇಲೆ ಎಲ್ಲರೂ ಸರಿ ಸಮಾನರೇ ಎಲ್ಲರೂ ನಮ್ಮವರೆ “ಇವನು ಯಾರು ಇವನು ಯಾರು” ಎಂದು ಕೇಳುವುದು ಸರಿಯಲ್ಲ. ಇವನು ನಮ್ಮವನು ಇವನು ನಮ್ಮವನು ಎಂದು ಪ್ರೀತಿಯಿಂದ ಅಪ್ಪಿಕೊಳ್ಳಬೇಕೆಂಬ ಮಾನವ ಭ್ರಾತೃತ್ವದ ದಿವ್ಯ ಸಂದೇಶ ನೀಡಿದ ಬಸವಣ್ಣನವರು, ಮಾದಾರ ಚನ್ನಯ್ಯನನ್ನು ತನ್ನ ಅಪ್ಪನೆಂದು, ಡೋಹರ ಕಕ್ಕಯ್ಯನನ್ನು ತನ್ನ ದೊಡ್ಡಪ್ಪನೆಂದು, ಕಿನ್ನರ ಬೊಮ್ಮಯ್ಯನನ್ನು ತನ್ನ ಅಣ್ಣನೆಂದು ಸಂಬೋಧಿಸುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ಹಾಗೂ ಸ್ವಾಭಿಮಾನದ ಶಕ್ತಿಯನ್ನು ತುಂಬಿದ ಹಿರಿಮೆ ಬಸವಣ್ಣನವರಿಗೆ ಸಲ್ಲುತ್ತದೆ. ದಲಿತರ ಬಗ್ಗೆ ಅವರಿಗಿದ್ದ ಸಹಜ ಪ್ರೀತಿ ಹಾಗೂ ಗೌರವಕ್ಕೆಅವರ ಈ ಅಭಿಮಾನದ ಮಾತು ಸಾಕ್ಷಿಯಾಗಿದೆ.
ಸ್ತ್ರೀ ಸಮಾನತೆ:
ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರು ಹೆಣ್ಣಿನ ಬಗ್ಗೆ ಅತ್ಯಂತ ಅಭಿಮಾನದಿಂದ ದನಿ ಎತ್ತಿದ್ದಾರೆ. ಹೆಣ್ಣಿನ ಬಗ್ಗೆ ಭಾರತೀಯ ವೈದಿಕ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದ್ದ ಕೀಳುಭಾವನೆಯನ್ನು, ಅಸಮಾನತೆಯನ್ನು ಬಸವಣ್ಣನವರ ಈ ಚಳವಳಿ ತೊಡೆದು ಹಾಕಿದೆ. ಹೆಣ್ಣು ಮಾಯೆಯಲ್ಲ, ಆತ್ಮಕ್ಕೆ ಲಿಂಗಭೇದವಿಲ್ಲ, ಹೆಣ್ಣು ಅಸ್ಪೃಶ್ಯಳಲ್ಲ. ಹೆಣ್ಣು ಪ್ರತ್ಯಕ್ಷ ದೇವತೆ, ಪರಸ್ತ್ರೀ ಪಾರ್ವತಿಯ ಸಮಾನ ಎಂದು ಸಾರುವ ಮೂಲಕ ಸ್ತ್ರೀ ಸಮಾನತೆಯನ್ನು ಪ್ರತಿಪಾದಿಸಿದ ಹಿರಿಮೆ ಬಸವಣ್ಣನವರಿಗೆ ಮತ್ತು ಅವರ ಸಮಕಾಲೀನ ಶರಣರಿಗೆ ಸಲ್ಲುತ್ತದೆ.
ವೈದಿಕ ವರ್ಣಾಶ್ರಮ ವ್ಯವಸ್ಥೆ ಮತ್ತು ಪಿತೃಪ್ರಧಾನ ಕುಟುಂಬ ಪದ್ಧತಿಗಳಿಂದಾಗಿ ಸಮಾಜದಲ್ಲಿ ಸ್ತ್ರೀಗೆ ಉಂಟಾಗಿದ್ದ ಅಸಮಾನತೆ, ಶೋಷಣೆಗಳನ್ನು ಕಂಡು ವಚನಕಾರರು ಕಿಡಿಕಾರಿ ಸಮಾನತೆಯ ಸಮಾಜವನ್ನು ನಿರ್ಮಿಸುವಲ್ಲಿ ಪ್ರಯತ್ನ ನಡೆಸಿದ್ದಾರೆ. ಪ್ರಾಪಂಚಿಕ ಹಾಗೂ ಪರಮಾರ್ಥಿಕ ಎರಡು ನೆಲೆಗಳಲ್ಲಿಯೂ ಹೆಣ್ಣನ್ನು ಸಮಾನ ಅವಕಾಶಗಳೊಂದಿಗೆ ಪರಿಗಣಿಸಿದ್ದಾರೆ. ಈ ವಚನ ಚಳವಳಿಯಲ್ಲಿ ಸುಮಾರು 35 ವಚನಕಾರ್ತಿಯರು ಸುಮಾರು 1351 ವಚನಗಳನ್ನು ಬರೆದಿರುವುದಾಗಿ ಡಾ. ವೀರಣ್ಣ ರಾಜೂರ ಅವರು ತಿಳಿಸುತ್ತಾರೆ. 12ನೆಯ ಶತಮಾನದಲ್ಲಿ ಒಮ್ಮೆಗೇ ಇಷ್ಟು ಜನ ಮಹಿಳೆಯರು ಸಾಹಿತ್ಯ ಕ್ಷಿತಿಜದ ಮೇಲೆ ಕಾಣಿಸಿಕೊಂಡದ್ದು ಪರಮ ಆಶ್ಚರ್ಯ ಎಂದು ಅವರು ಅಭಿಪ್ರಾಯಪಡುತ್ತಾರೆ. ಬಸವಣ್ಣನವರ ನಾಯಕತ್ವದಲ್ಲಿ ನಡೆದ ಚಳವಳಿಯು ಹೆಣ್ಣಿನ ಸ್ಥಾನಮಾನದ ಬಗ್ಗೆ ಅಂದು ತಳೆದ ನಿಲುವು ಇಂದಿನ ಸಮಾಜಕ್ಕೆ ಮಾದರಿ ಸ್ವರೂಪದಲ್ಲಿದೆ.
ಕಾಯಕ ತತ್ವ:
ಬಸವಣ್ಣನವರು ಪ್ರತಿಪಾದಿಸಿದ ಬಹು ದೊಡ್ಡ ಆರ್ಥಿಕ ಸೂತ್ರವೆಂದರೆ ಕಾಯಕತತ್ವ. ಬಸವಣ್ಣನವರ ದೃಷ್ಟಿಯಲ್ಲಿ ಪ್ರತಿಯೊಬ್ಬ ಶರಣನಿಗೂ ಕಾಯಕ ಅನಿವಾರ್ಯ. ಕಾಯಕವಿಲ್ಲದೆ ಗುರು ಲಿಂಗ ಜಂಗಮರಿಗೂ ಮುಕ್ತಿಯಿಲ್ಲ ಎಂಬ ಹಾಗೂ “ಕಾಯಕವೇ ಕೈಲಾಸ” ಎಂಬ ಸಿದ್ಧಾಂತದ ಪ್ರತಿಪಾದನೆಗೆ ಬಸವಣ್ಣನವರೇ ನಿಜವಾದ ಸ್ಫೂರ್ತಿಯಾಗಿದ್ದರು. ಕಾಯಕವು ಎಷ್ಟು ಮುಖ್ಯವೋ ಶರಣರು ಕೈಗೊಳ್ಳುವ ಕಾಯಕಕ್ಕೆ ಅವರು ಅಷ್ಟೇ ಗೌರವ ನೀಡಬೇಕು. ಕಾಯಕದಲ್ಲಿ ಮೇಲು ಕೀಳು ಎಂಬ ಭಾವ ಸಲ್ಲದು. ಶರಣರು ಮಾಡುವ ಕಾಯಕವು ಸತ್ಯ ಶುದ್ಧವಾಗಿರಬೇಕು, ಸಮಾಜಮುಖಿಯಾಗಿರಬೇಕು ಎಂಬುದು ಬಸವಣ್ಣನವರ ಅಚಲವಾದ ನಂಬಿಕೆ. ಈ ವಚನವು ಈ ಆಶಯವನ್ನು ಪ್ರತಿಪಾದಿಸುತ್ತದೆ.
“ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲವೆ, ಸತ್ಪಾತ್ರಕ್ಕೆ ಸಲ್ಲದಯ್ಯ,
ನಾಯ ಹಾಲು ನಾಯಿಗಲ್ಲದೆ ಪಂಚಾಮೃತಕ್ಕೆ ಸಲ್ಲದಯ್ಯ,
ನಮ್ಮ ಕೂಡಲಸಂಗನ ಶರಣರಿಗಲ್ಲದ
ಮಾಡುವ ಅರ್ಥ ವ್ಯರ್ಥ ಕಂಡಯ್ಯ”
ಇಲ್ಲಿ ಕೂಡಲ ಸಂಗನ ಶರಣರು ಎಂದರೆ ನಮ್ಮ ಸುತ್ತ ಇರುವ ಸಮಾಜ ಸಮಾಜದಲ್ಲಿನ
ನೊಂದವರ ಬಗ್ಗೆ ಹಸಿದವರಿಗಾಗಿ ನಮ್ಮ ಕಾಯಕದ ಫಲ ದೊರಕಬೇಕು.
ದಾಸೋಹ ಸಿದ್ಧಾಂತ:
ಬಸವಣ್ಣನವರ ದೃಷ್ಟಿಯಲ್ಲಿ ದಾಸೋಹ, ಪ್ರೀತಿ, ಪರಸ್ಪರ ಗೌರವದಿಂದ ದಾಸೋಹದ ಫಲ
ಪಡೆಯುವವರ ಆತ್ಮಾಭಿಮಾನಕ್ಕೆ ಧಕ್ಕೆ ಆಗದ ಹಾಗೆ ನೀಡುವವರ ಹಾಗೂ ಪಡೆಯುವವರ ನಡುವೆ ಸಮಾನತೆಯ ಸ್ವಾಭಿಮಾನದಿಂದ ನಡೆಯಬೇಕಾದ ಒಂದು ಸಾಮಾಜಿಕ ಕರ್ತವ್ಯ. ಅವರ ದಾಸೋಹ ಸಿದ್ಧಾಂತದಲ್ಲಿ ಧಾರ್ಮಿಕ ಭಾವ ಹಾಗೂ ಆರ್ಥಿಕ ಚಿಂತನೆ ಎರಡೂ ಅಡಗಿವೆ. ತಾನು ಕಾಯಕದಿಂದ ಗಳಿಸಿದ ಧನವು ಲೋಕ ಕಲ್ಯಾಣದ ದಾಸೋಹ ಕಾರ್ಯದಲ್ಲಿ ಸಂಪೂರ್ಣವಾಗಿ ಸವೆಯಬೇಕೆಂಬುದು ಅವರ ಸದಾಶಯ.
“ಕಾಗೆ ಒಂದಗುಳ ಕಂಡಡೆ ಕರೆಯದೆ ತನ್ನ ಬಳಗವನು?
ಕೋಳಿ ಒಂದು ಕುಟುಕ ಕಂಡಡೆ ಕೂಗಿ ಕರೆಯದೆ ತನ್ನ ಕುಲವನೆಲ್ಲವ?
ಶಿವಭಕ್ತನಾಗಿ ಭಕ್ತಿಪಕ್ಷವಿಲ್ಲದಿದ್ದಡೆ ಕಾಗೆ ಕೋಳಿಯಿಂದ ಕರಕಷ್ಟ
ಕೂಡಲಸಂಗಮದೇವಾ.”
ಹಂಚಿಕೊಂಡು ತಿನ್ನುವ ದಾಸೋಹ ಭಾವ ಪ್ರಾಣಿ ಪಕ್ಷಿಗಳಲ್ಲಿ ಇರುವುದನ್ನು ಬಸವಣ್ಣನವರು ಗುರುತಿಸುತ್ತಾರೆ. ಪ್ರಾಣಿ ಪಕ್ಷಿಗಳಲ್ಲಿ ಇರುವ ಹಂಚಿಕೊಂಡು ತಿನ್ನುವ ಸಹಬಾಳ್ವೆಯ ಭಾವನೆ ಬುದ್ಧಿ ವಿವೇಚನೆ ಉಳ್ಳ ಮಾನವನಲ್ಲಿ ಇಲ್ಲವಲ್ಲ ಎಂಬ ತಮ್ಮ ವಿಷಾದವನ್ನು ಈ ವಚನದ ಮೂಲಕ ಅಭಿವ್ಯಕ್ತಿಗೊಳಿಸಿದ್ದಾರೆ ಮಹಾ ದಾಸೋಹಿ ಬಸವಣ್ಣನವರು.
“ಜನ್ಮ ಜನ್ಮಕ್ಕೆ ಹೋಗಲೀಯದೆ,
‘ಸೋಹಂ’ ಎಂದೆನಿಸದೆ
‘ದಾಸೋಹಂ’ ಎಂದೆನಿಸಯ್ಯಾ
ಲಿಂಗಜಂಗಮಪ್ರಸಾದದ ನಿಲವ ತೋರಿ ಬದುಕಿಸಯ್ಯಾ
ಕೂಡಲಸಂಗಮದೇವಾ ನಿಮ್ಮ ಧರ್ಮ”
ಜನ್ಮ ಜನ್ಮಗಳ ಹಿಂದೆ ಹೋಗದೆ ನಾನೇ ಸರ್ವಸ್ವವೆಂದು ಅಹಮ್ಮನ್ನು ತೋರದೆ ದಾಸೋಹದಲ್ಲಿ ನಿರತನಾಗಿ ಲಿಂಗಜಂಗಮ ಪ್ರಸಾದದ ಮಹಿಮೆಯನ್ನು ತೋರಬೇಕೆಂಬ ನಿಲುವು ಬಸವಣ್ಣನವರದು.
ಸಮಾಜವಾದದ ಪ್ರತಿಪಾದನೆ:
“ಹೊನ್ನಿನೊಳಗೊಂದೆರೆಯ
ಸೀರೆಯೊಳಗೊಂದೆಳೆಯ, ಅನ್ನದೊಳದೊಂದುಗುಳ
ಇಂದಿಂಗೆ ನಾಳಿಂಗೆ ಬೇಕೆಂದೆನಾದಡೆ,
ನಿಮ್ಮಾಣೆ, ನಿಮ್ಮ ಪ್ರಮಥರಾಣೆ,
ನಿಮ್ಮ ಶರಣರಿಗಲ್ಲದೆ ಮತ್ತೊಂದನರಿಯೆ
ಕೂಡಲಸಂಗಮದೇವ.”
ಅಂದು ದುಡಿದದ್ದನ್ನು ಅಂದಂದಿಗೇ ಬಳಸಬೇಕು. ನಾಳೆಗೆ ಬೇಕು ಎಂದು ಚಿಂತಿಸಬಾರದು ಎನ್ನುವ ಮೂಲಕ ಅನಗತ್ಯವಾಗಿ ಭವಿಷ್ಯಕ್ಕೆ ಬೇಕೆಂದು ಆಸೆಯಿಂದ ಸಂಪತ್ತನ್ನು ಸಂಗ್ರಹಿಸಿ ಇಡುವ ಪ್ರವೃತ್ತಿಯು ಶರಣರ ದೃಷ್ಟಿಯಲ್ಲಿ ಒಂದು ಸಾಮಾಜಿಕ ದ್ರೋಹವಿದ್ದಂತೆ. ಇಂತಹ ಸಾಮಾಜಿಕ ಬದುಕಿನ ನೀತಿ ಸಂತೆಯನ್ನು ಪ್ರತಿಪಾದನೆ ಮಾಡಿದ ಶರಣರಿಗೆ ದಿನ ನಿತ್ಯದ ಕಾಯಕ ಅನಿವಾರ್ಯವಾದಂತೆ ಸಮರ್ಪಣಾ ಭಾವದಿಂದ ಸಮಾಜಕ್ಕೆ ಮಾಡುವ ದಾಸೋಹವು ಸಹಾ ಅಷ್ಟೇ ಅನಿವಾರ್ಯವಾದದ್ದು ಎಂಬುದು ಅವರ ಸಮಾಜವಾದಿ ಸಮಾಜಮುಖಿ ಚಿಂತನೆಗೆ ಹಿಡಿದ ಕನ್ನಡಿಯಂತಿದೆ.
ವೈಚಾರಿಕ ಚಿಂತನೆ :
“ಕಲ್ಲ ನಾಗರ ಕಂಡರೆ ಹಾಲನೆರೆಯೆಂಬರು,
ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯಾ,
ಉಂಬ ಜಂಗಮ ಬಂದಡೆ ನಡೆಯೆಂಬರು,