ಬೆಂಗಳೂರು/ರಾಯಚೂರು:ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿ ನಾಲ್ಕು ತಿಂಗಳ ಅಲ್ಪ ಅವಧಿಯಲ್ಲೇ ಅಶೋಕ್ ಗಸ್ತಿ ಇಹಲೋಕ ತ್ಯಜಿಸಿದ್ದಾರೆ. ನಗರಸಭೆಯಿಂದ ಆರಂಭಗೊಂಡ ಇವರ ರಾಜಕೀಯ ಜೀವನ ರಾಜ್ಯಸಭೆಯೊಂದಿಗೆ ಅಂತ್ಯ ಕಂಡಿದೆ.
ಸವಿತಾ ಸಮಾಜಕ್ಕೆ ಸೇರಿದ್ದ ಅಶೋಕ್ ಗಸ್ತಿ ಸಂಘ ಪರಿವಾರದ ಶಿಸ್ತಿನ ಸಿಪಾಯಿ. ಎಬಿವಿಪಿ ಮೂಲಕ ಆರ್ಎಸ್ಎಸ್ ಸಖ್ಯಕ್ಕೆ ಬಂದಿದ್ದ ಗಸ್ತಿ ನಂತರ ಬಿಜೆಪಿ ಮೂಲಕ ರಾಜಕೀಯ ಕ್ಷೇತ್ರಕ್ಕೆ ಪ್ರವೇಶ ಮಾಡಿದ್ದ ಇವರು ತಳ ಮಟ್ಟದಿಂದ ಪಕ್ಷ ಸಂಘಟನೆ ಮಾಡಿರುವ ಕೀರ್ತಿ ಗಳಿಸಿದ್ದಾರೆ.
ರಾಜ್ಯಸಭೆಗೆ ಆಯ್ಕೆಯಾಗಿದ್ದ ವೇಳೆ 'ಈಟಿವಿ ಭಾರತ' ಜೊತೆ ಮಾತು ನಾಲ್ಕು ದಶಕದ ಸೇವೆಗೆ ರಾಜ್ಯಸಭಾ ಸ್ಥಾನ ಅವರನ್ನು ಹುಡುಕಿಕೊಂಡು ಬಂದಿತ್ತು.1982ರಲ್ಲಿ ವಿದ್ಯಾರ್ಥಿ ಜೀವನದಲ್ಲೇ ಎಬಿವಿಪಿ ಕಾರ್ಯದರ್ಶಿಯಾಗಿ ಸಂಘಟನಾತ್ಮಕ ಕೌಶಲ್ಯ ಹೊಂದಿದ್ದರು.
ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ನಿಧನ... ಪ್ರಧಾನಿ ಮೋದಿ ಸೇರಿ ಬಿಜೆಪಿ ನಾಯಕರಿಂದ ಸಂತಾಪ
ವಿದ್ಯಾರ್ಥಿ ಜೀವನ ಮುಗಿಸಿ ಕರಿಕೋಟು ತೊಟ್ಟು ವಕೀಲಿಕೆ ವೃತ್ತಿಯೊಂದಿಗೆ ಬಿಜೆಪಿ ಸೇರ್ಪಡೆಯಾಗಿ ರಾಜಕೀಯ ಜೀವನವನ್ನೂ ಆರಂಭಿಸಿದ್ದರು. ಕೊಪ್ಪಳ, ಬಳ್ಳಾರಿ, ರಾಯಚೂರು ಬಿಜೆಪಿ ಪ್ರಭಾರಿಯಾಗಿ ಕೆಲಸ ನಿರ್ವಹಣೆ ಮಾಡಿ ಪಕ್ಷದ ನಾಯಕರ ಗಮನ ಸೆಳೆದಿದ್ದರು. ಪ್ರತಿ ಚುನಾವಣೆಯಲ್ಲಿಯೂ ತೆರೆಯ ಹಿಂದೆ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದರು.
ಅಶೋಕ್ ಗಸ್ತಿ ನಡೆದು ಬಂದ ಹಾದಿ:1989ರಲ್ಲಿ ರಾಯಚೂರು ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸ್ಥಾನ, 1993 ರಲ್ಲಿ ರಾಯಚೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ, 2001ರಲ್ಲಿ ರಾಯಚೂರು ನಗರಸಭೆ ಸದಸ್ಯರಾಗಿ ಆಯ್ಕೆ, 2010ರಲ್ಲಿ ರಾಯಚೂರು ಜಿಲ್ಲಾ ಬಿಜೆಪಿ ಅಧ್ಯಕ್ಷ, 2012ರಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಆಯ್ಕೆ, 2020ರಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆ, 2020ರಲ್ಲಿ ಹಿಂದುಳಿದ ವರ್ಗಗಳ ಮೋರ್ಚಾ ಪ್ರಧಾನ ಕಾರ್ಯದರ್ಶಿ ಆಗಿ ಆಯ್ಕೆಯಾಗಿದ್ದರು.
ಶಿಸ್ತಿನ ಸಿಪಾಯಿ ಅಶೋಕ್ ಗಸ್ತಿ ನಡೆದು ಬಂದ ದಾರಿ ಕಳೆದ ವಿಧಾನಸಭಾ ಚುನಾವಣೆ ವೇಳೆ ರಾಯಚೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಆಗ ಟಿಕೆಟ್ ಕೈತಪ್ಪಿತ್ತು. ವಿಧಾನಸಭೆ ಪ್ರವೇಶಕ್ಕೆ ಅವಕಾಶ ಸಿಗದೇ ಇದ್ದರೂ ರಾಜ್ಯಸಭೆ ಟಿಕೆಟ್ ಅವರನ್ನು ಹುಡುಕಿಕೊಂಡು ಬಂದಿತ್ತು. ಅವರ ಪಕ್ಷ ನಿಷ್ಠೆ, ಪಕ್ಷಕ್ಕಾಗಿ ಸಲ್ಲಿಸಿದ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಜೂನ್ ನಲ್ಲಿ ಅವರಿಗೆ ರಾಜ್ಯಸಭಾ ಟಿಕೆಟ್ ನೀಡಿತ್ತು. ರಾಜ್ಯಸಭಾ ಸದಸ್ಯರಾಗಿ ಗಸ್ತಿ ಅವಿರೋಧವಾಗಿ ಆಯ್ಕೆಯೂ ಆಗಿದ್ದರು. ಪಕ್ಷದ ಅಚ್ಚರಿ ನಿರ್ಧಾರಕ್ಕೆ ಅಭಿಮಾನದಿಂದಲೇ ಪಕ್ಷದ ವರಿಷ್ಠರ ನಂಬಿಕೆ ಉಳಿಸಿಕೊಳ್ಳುವ ಹಾಗೂ ಜನರ ಸೇವೆಯನ್ನೂ ಮಾಡುವ ಭರವಸೆ ನೀಡಿದ್ದರು. ಆದರೆ ಅಲ್ಪ ಅವಧಿಯಲ್ಲೇ ಅವರು ಕೊರೊನಾಗೆ ಬಲಿಯಾಗಿದ್ದು ಮಾತ್ರ ದುರ್ದೈವದ ಸಂಗತಿಯಾಗಿದೆ.