ಚಿಕ್ಕಮಗಳೂರು:ಆ ಮಂಗ ಈ ಹಳ್ಳಿಗೆ ಬಂದ ಮೇಲೆ ಜಲ್ಲಿ ಕಾಣದ ರಸ್ತೆಗೆ ಸಿಮೆಂಟ್ ಬಂದಿತ್ತು. ನೀರಿಗಾಗಿ 2 ಕಿ.ಮೀ. ಹೋಗುತ್ತಿದ್ದ ಜನಗಳಿಗೆ, ಗ್ರಾಮದಲ್ಲೇ ಬೋರ್ವೆಲ್ಗಳಲ್ಲಿ ನೀರು ಬಂತು. ಹತ್ತಾರು ವರ್ಷದಿಂದ ಒತ್ತುವರಿಯಾಗಿದ್ದ ಗೋಮಾಳ, ಒಂದೇ ತಿಂಗಳಲ್ಲಿ ಹಳ್ಳಿಗರ ಪಾಲಾಗಿತ್ತು.
ಚಿಕ್ಕಮಗಳೂರು ಗಡಿಯ ಗ್ರಾಮವಾದ ಚನ್ನಾಪುರದಲ್ಲಿ ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದ ಕೋತಿಯ ನೆನಪಲ್ಲಿ ಆಂಜನೇಯ ಮೂರ್ತಿ ಪ್ರತಿಷ್ಠಾಪನೆ ಗ್ರಾಮದಲ್ಲಿ ಮಂಗನ ಆಗಮನದಿಂದ ಸಮಸ್ಯೆಗಳು ಮಾಯವಾಗಿದ್ದವು ಎನ್ನುವುದು ಗ್ರಾಮಸ್ಥರ ನಂಬಿಕೆ. ಎರಡು ವರ್ಷಗಳ ಹಿಂದೆ ಸಾವನ್ನಪ್ಪಿದ ಅದೇ ಮಂಗಕ್ಕೆ ಗ್ರಾಮವೇ ಮರುಗಿತ್ತು. ಅವರೆಲ್ಲ ಮನನೊಂದು ಕಣ್ಣೀರಿಟ್ಟು, ಮಾಡಿದ ಕೆಲಸ ಕೇಳಿದ್ರೆ ನಿಮಗೂ ಆಶ್ಚರ್ಯವಾಗುತ್ತೆ!
ಚಿಕ್ಕಮಗಳೂರು-ಹಾಸನ ಗಡಿಯಲ್ಲಿರುವ ಗ್ರಾಮ ಚನ್ನಾಪುರ. ಈ ಗ್ರಾಮದ ಮಧ್ಯೆ ಇರುವ ಆಂಜನೇಯ ದೇವಸ್ಥಾನ ಎದುರು ಎರಡು ವರ್ಷಗಳ ಹಿಂದೆ ಸಾವನ್ನಪ್ಪಿದ ಮಂಗನ ಸಂಸ್ಕಾರ ಮಾಡಲಾಗಿದೆ. ಈಗ ಆಂಜನೇಯನ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ. ಇದಕ್ಕೆಲ್ಲ ಗ್ರಾಮಸ್ಥೆರೇ ಜವಾಬ್ದಾರಿ ತೆಗೆದುಕೊಂಡು ಹಣ ಹೊಂದಿಸಿ ದೇವಾಲಯ ನಿರ್ಮಿಸಿರುವುದು ಮತ್ತೊಂದು ವಿಶೇಷ.
ಅದ್ಧೂರಿ ಅಂತ್ಯ ಸಂಸ್ಕಾರ:
ಮೃತ ಮಂಗನ ದೇಹವನ್ನು ಡೊಳ್ಳು-ಓಲಗ, ವಾದ್ಯಗಳೊಂದಿಗೆ ಊರಲ್ಲೆಲ್ಲಾ ಮೆರವಣಿಗೆ ಮಾಡಿ, ಭಟ್ಟರನ್ನು ಕರೆಸಿ ಹಿಂದೂ ಸಂಪ್ರದಾಯದಂತೆ ಗುಂಡಿ ತೆಗೆದು ಮಣ್ಣು ಮಾಡಿದ್ದರು. 11ನೇ ದಿನಕ್ಕೆ ತಿಥಿ ಮಾಡಿ ನೂರಾರು ಜನಕ್ಕೆ ಊಟವನ್ನೂ ಹಾಕಿಸಿದ್ದರು. ಊರಿನ ಮಧ್ಯ ಆಂಜನೇಯ ದೇವಾಲಯದ ಎದುರೇ ಮಣ್ಣು ಮಾಡಲಾಗಿತ್ತು. ಈಗ ಕೋತಿಯ ಚಿತೆ ಮೇಲೆ ಗುಡಿ ಕಟ್ಟಿ ಆಂಜನೇಯನನ್ನು ಪ್ರತಿಷ್ಠಾಪಿಸಲಾಗಿದೆ. ಅನ್ನ ಸಂತರ್ಪಣೆ ಮಾಡಲಾಗುತ್ತಿದೆ. ಒಟ್ಟಾರೆ ಆಂಜನೇಯನೆ ಕೋತಿ ರೂಪದಲ್ಲಿ ಬಂದಿದ್ದಾನೆ ಎಂಬ ಭಾವನೆ ಇಲ್ಲಿನ ಜನಗಳದ್ದು.