ಚೆನ್ನೈ:ದೇವಾಯಲವೊಂದರಲ್ಲಿ ಜನಸಂದಣಿಯಿಂದಾಗಿ ಕಾಲ್ತುಳಿತ ಉಂಟಾಗಿ ಸುಮಾರು 7 ಮಂದಿ ಸಾವನ್ನಪ್ಪಿ, 10 ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಮಿಳುನಾಡಿನ ತಿರುಚ್ಚಿ ಜಿಲ್ಲೆಯ ತುರೈಯೂರ್ನಲ್ಲಿ ನಡೆದಿದೆ.
ಮುತಲಮ್ಮನಪಾಯಮ್ ಗ್ರಾಮದ ದೇವಸ್ಥಾನದ ಉತ್ಸವದ ವೇಳೆ ಈ ದುರಂತ ನಡೆದಿದ್ದು, ನಾಲ್ವರು ಮಹಿಳೆಯರು ಸೇರಿದಂತೆ ಒಟ್ಟು 7 ಮಂದಿ ಭಕ್ತರು ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ.
ಚಿತ್ರ ಪೌರ್ಣಮಿ ಅಂಗವಾಗಿ 'ಪಿಡಿಕಾಸು' (ದೇವಾಲಯದ ನಾಣ್ಯಗಳು) ಹಂಚುವ ವೇಳೆ ಎಲ್ಲರೂ ಏಕಾಏಕಿಯಾಗಿ ಮುಗಿಬಿದ್ದ ಕಾರಣ ಘಟನೆ ಸಂಭವಿಸಿದೆ. ಪ್ರತಿ ವರ್ಷ ನಡೆಯುವ ಈ ದೇವಸ್ಥಾನದ ಜಾತ್ರೆಗೆ ಅಪಾರ ಪ್ರಮಾಣದಲ್ಲಿ ಭಕ್ತಾದಿಗಳು ಆಗಮಿಸಿದ್ದರು.
ಪರಿಹಾರ ಘೋಷಣೆ
ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದ್ದಾರೆ. ಅವಘಡದಲ್ಲಿ ಸಾವನ್ನಪ್ಪಿರುವ ಕುಟುಂಬಗಳಿಗೆ ತಲಾ 2ಲಕ್ಷ ರೂ. ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ. ಇತ್ತ ತಮಿಳುನಾಡು ಸಿಎಂ ಕೆ ಪಳನಿಸ್ವಾಮಿ ತಲಾ 1ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರೂಪಾಯಿ ಘೋಷಿಸಿದ್ದಾರೆ.