ಮಂಗಳೂರು:ಬೆಂಗಳೂರಿನಿಂದ ಮಂಗಳೂರಿಗೆ ಅಕ್ರಮವಾಗಿ ಸಾಗಿಸುತ್ತಿದ್ದ ಎಂಡಿಎಂಎ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಮದ್ ಮನಾಫ್, ಮಹಮ್ಮದ್ ಮಝಾಂಬಿಲ್, ಅಹಮದ್ ಮಸೂಕ್ ಎಂಬವರನ್ನು ಬಂಧಿಸಲಾಗಿದೆ. ಅಬ್ದುಲ್ ಮನಾಫ್ (24) ಬೆಂಗಳೂರಿನಲ್ಲಿ ವಿದ್ಯಾರ್ಥಿಯಾಗಿದ್ದಾನೆ. ಅಹಮದ್ ಮಸೂಕ್ ಬೆಂಗಳೂರಿನ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದರೆ, ಮಹಮ್ಮದ್ ಮಝಾಂಬಿಲ್ ಬೆಂಗಳೂರಿನ ಸ್ಪೋರ್ಟ್ ಶಾಪ್ನಲ್ಲಿ ಕೆಲಸ ನಿರ್ವಹಿಸುತ್ತಿದ್ದನು. ಇವರೆಲ್ಲರೂ ಕೇರಳದ ಕಾಸರಗೋಡು ಮೂಲದವರಾಗಿದ್ದಾರೆ ಎಂದು ತಿಳಿಸಿದರು.
ಇವರು ಹಾಸನ ಮಾರ್ಗವಾಗಿ ಮಂಗಳೂರಿಗೆ ಬರುವಾಗ ಕೋಣಾಜೆಯಲ್ಲಿ ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಇವರಲ್ಲಿ 170 ಗ್ರಾಂ ನಿಷೇಧಿತ ಎಂಡಿಎಂಎ ಸಿಂಥೆಟಿಕ್ ಡ್ರಗ್ಸ್ ಸಿಕ್ಕಿದೆ. ಇದನ್ನು ಅವರು ಪ್ರತಿ ಗ್ರಾಂಗೆ 6000 ರೂಪಾಯಿಯಂತೆ ಮಾರುತ್ತಿದ್ದರು. ಸದ್ಯ 10 ಲಕ್ಷಕ್ಕೂ ಹೆಚ್ಚು ಮೌಲ್ಯದ ಎಂಡಿಎಂಎ, 5 ಲಕ್ಷ ಮೌಲ್ಯದ ಕಾರು ಮತ್ತು 4 ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಇವರು ಬೆಂಗಳೂರಿನಿಂದ ಆಫ್ರಿಕನ್ ಪ್ರಜೆಯೋರ್ವನಿಂದ ಎಂಡಿಎಂಎ ಸಿಂಥೆಟಿಕ್ ಡ್ರಗ್ಸ್ ಖರೀದಿಸಿ ಮಾರಾಟ ಮಾಡಲು ಯತ್ನಿಸಿದ್ದರು. ಆಫ್ರಿಕನ್ ಪ್ರಜೆಯ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದು, ಇವರಿಂದ ಎಂಡಿಎಂಎ ಖರೀದಿಸಿದವರ ಮಾಹಿತಿ ಕಲೆ ಹಾಕಿ ತನಿಖೆ ಮುಂದುವರಿಸಲಾಗಿದೆ ಎಂದು ಕಮೀಷನರ್ ತಿಳಿಸಿದ್ದಾರೆ.